ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ದರ ಇದೀಗ ದಾಖಲೆಯ ಮಟ್ಟ ತಲುಪಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬಾಯ್ಲರ್ ಚಿಕನ್ ಬೆಲೆ 360 ರೂಪಾಯಿಗೆ ಹಾಗೂ ಒಂದು ಮೊಟ್ಟೆಯ ಚಿಲ್ಲರೆ ದರ 9 ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆಯ ಮಾಹಿತಿ ಪ್ರಕಾರ, ಚರ್ಮವಿಲ್ಲದ ಬಾಯ್ಲರ್ ಚಿಕನ್ ಪ್ರತಿ ಕೆಜಿಗೆ 360 ರೂಪಾಯಿ ಹಾಗೂ ಚರ್ಮ ಸಮೇತ ಚಿಕನ್ ಪ್ರತಿ ಕೆಜಿಗೆ 340 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ 300 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಈಗ 350ರಿಂದ 360 ರೂಪಾಯಿವರೆಗೆ ಏರಿಕೆಯಾಗಿದೆ.




