ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಭೀಕರ ಗಾಳಿ-ಮಳೆಗೆ ಕಾಶಿಪಟ್ಣ ಗ್ರಾಮವು ಅಕ್ಷರಶಃ ತತ್ತರಿಸಿ ಹೋಗಿದೆ. ರಣಭೀಕರ ಗಾಳಿಯ ಆರ್ಭಟಕ್ಕೆ ಮರಗಳು ಧರೆಗುರುಳಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮನೆ ಮೇಲೆ ಬಿದ್ದ ಮರ
ಕಾಶಿಪಟ್ಣದ ಸುಂದರ್ ನೆಲ್ಲಿಗುಡ್ಡೆ ಎಂಬುವವರ ಮನೆ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮನೆಗೆ ಅಪಾರ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದರೂ, ಮರ ಬಿದ್ದ ರಭಸಕ್ಕೆ ಸುಂದರ ಅವರ ಮನೆಯ ಹಂಚುಗಳು ಸಂಪೂರ್ಣವಾಗಿ ಪುಡಿಯಾಗಿದೆ.
ನೂರಾರು ಅಡಿಕೆ ಮರಗಳು ಬುಡಮೇಲಾಗಿವೆ. ಟ್ಯಾಪಿಂಗ್ ಹಂತದಲ್ಲಿದ್ದ ರಬ್ಬರ್ ಮರಗಳು ಮುರಿದು ಬಿದ್ದಿವೆ. ಫಲವತ್ತಾದ ಕೃಷಿ ಭೂಮಿ ಈಗ ಮರಗಳ ಅವಶೇಷಗಳಿಂದ ತುಂಬಿಹೋಗಿದ್ದು, ರೈತರಿಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ.
ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಇದರಿಂದಾಗಿ ಮುಖ್ಯ ರಸ್ತೆಗಳಲ್ಲಿ ಮರಗಳು ಬಿದ್ದಿರುವುದರಿಂದ ವಾಹನ ಸವಾರರು ಗಂಟೆಗಳ ಕಾಲ ಪರದಾಡುವಂತಾಯಿತು. ಇದೇ ಭಾಗದ ಕೋಳಿ ಫಾರ್ಮ್ಗಳಿಗೂ ಹಾನಿಯಾಗಿವೆ. ಮಳೆಗಾಲದ ಆರಂಭದಲ್ಲೇ ಈ ರೀತಿಯ ಅವಾಂತರ ಸೃಷ್ಟಿಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.





