ಬೆಂಗಳೂರು: ಕೇಂದ್ರ ಸರ್ಕಾರ ವತಿಯಿಂದ ಕೊಡಮಾಡುವ 2025ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯದ 06 ಪಂಚಾಯಿತಿಗಳಿಗೆ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ ಲಭಿಸಿದೆ. ಅದರಲ್ಲಿ ಬಹುತೇಕ ಉಡುಪಿ ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳೇ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 6 ಗ್ರಾಮ ಪಂಚಾಯತಿಗಳಿಗೆ 2025ನೇ ಸಾಲಿನ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ ಲಭಿಸಿರುವುದು ಅತ್ಯಂತ ಸಂತೋಷದ ವಿಷಯ. ಪ್ರಶಸ್ತಿ ವಿಜೇತ ಗ್ರಾಮ ಪಂಚಾಯತಿಗಳಿಗೆ ಅಭಿನಂದನೆಗಳು. ಪ್ರಥಮ, ದ್ವಿತೀಯ ಮತ್ತು ತೃತೀಯ ಹೀಗೆ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ರಾಜ್ಯದ ಪಂಚಾಯತಿಗಳು ಇತಿಹಾಸ ನಿರ್ಮಿಸಿವೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲೆ ಹೆಬ್ರಿಯ ಮುದ್ರಾಡಿ ಹಾಗೂ ಮಡಮಕ್ಕಿ, ಕುಂದಾಪುರ ತಾಲೂಕಿನ ವಂಡ್ಸೆ ಮತ್ತು ಹಕ್ಲಾಡಿ, ಕಾರ್ಕಳದ ಸಾನೂರು ಹಾಗೂ ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿಗಳು ಪುರಸ್ಕಾರಕ್ಕೆ ಭಾಜನವಾಗಿದೆ.
ಬಡತನ ನಿರ್ಮೂಲನೆ, ಜೀವನೋಪಾಯ ಸುಧಾರಣೆ, ಆರೋಗ್ಯಕರ ಪರಿಸರ, ಮಕ್ಕಳಸ್ನೇಹಿ ವ್ಯವಸ್ಥೆ, ಸ್ವಾವಲಂಬಿ ಮೂಲಸೌಕರ್ಯ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣ ಇನ್ನಿತರೆ ಕಾರ್ಯಗಳಲ್ಲಿ ಮಾಡಿರುವ ಅಮೋಘ ಸಾಧನೆಯನ್ನು ಗುರುತಿಸಿ, ಈ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದರು. ಆಡಳಿತ ವಿಕೇಂದ್ರೀಕರಣದ ಮೂಲಕ ಗ್ರಾಮ ಪಂಚಾಯತಿಗಳಿಗೆ ಬಲ ತುಂಬಿ, ಸದೃಢ ಭಾರತ ಕಟ್ಟುವುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಚಿಂತನೆಯ ಬೆಳಕಲ್ಲಿ ನಮ್ಮ ಸರ್ಕಾರ ಮುನ್ನಡೆಯುತ್ತಿದ್ದು, ರಾಜ್ಯಕ್ಕೆ ದೊರೆತ ಪ್ರಶಸ್ತಿಗಳು ನಮ್ಮ ಪ್ರಯತ್ನಕ್ಕೆ ಬಲ ತುಂಬಿವೆ ಎಂದು ಅವರು ಪಂಚಾಯತ್ ರಾಜ್ ಇಲಾಖೆ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ವ್ಯವಸ್ಥೆಯ ಉತ್ಕೃಷ್ಟತೆಯ ದ್ಯೋತಕ: ಖರ್ಗೆ ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಕರ್ನಾಟಕದ 6 ಗ್ರಾಮ ಪಂಚಾಯತಿಗಳು ಪ್ರಶಸ್ತಿ ಪಡೆದಿರುವುದು ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಉತ್ಕೃಷ್ಟತೆಯ ದ್ಯೋತಕವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು. 2025ರ ರಾಷ್ಟ್ರೀಯ ಪಂಚಾಯತ್ ಪುರಸ್ಕಾರದ ದೀನ್ ದಯಾಳ್ ಉಪಾಧ್ಯಾಯ ಸತತ್ ವಿಕಾಸ್ ಪುರಸ್ಕಾರದಲ್ಲಿ ಮುದ್ರಾಡಿ ಗ್ರಾಮ ಪಂಚಾಯತಿ, ವಂಡ್ಸೆ ಗ್ರಾಮ ಪಂಚಾಯತಿ, ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿ, ಮಡಾಮಕ್ಕಿ ಗ್ರಾಮ ಪಂಚಾಯತಿ, ಸಾಣೂರು ಗ್ರಾಮ ಪಂಚಾಯತಿ ಮತ್ತು ಹಕ್ಲಾಡಿ ಗ್ರಾಮ ಪಂಚಾಯತಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಯಾವೆಲ್ಲ ವಿಭಾಗದ ಕಾರ್ಯ ನಿರ್ವಹಣೆಗಾಗಿ ಪಂಚಾಯಿತಿಗಳು ಆಯ್ಕೆ ಆಗಿವೆ ಎಂಬುದನ್ನು ಸಚಿವರು ವಿವರಿಸಿದರು.





