ಬೆಂಗಳೂರು, ಜೂ. 16: ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ, ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಯಾಂಡಲ್ವುಡ್ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.ಜಯಮ್ಮ ಅವರು ಕೇವಲ ಸ್ಟಾರ್ ನಟರ ತಾಯಿಯಾಗಿ ಮಾತ್ರವಲ್ಲದೆ, ಇಡೀ ಕುಟುಂಬದ ಆಧಾರಸ್ತಂಭವಾಗಿದ್ದರು. ಪತಿ ಎಸ್.ಎ. ಚಿನ್ನೇಗೌಡ ಅವರ ನಿರ್ಮಾಪಕ ಜೀವನ ಹಾಗೂ ಪುತ್ರರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ಸಿನಿ ಪಯಣದ ಹಿಂದೆ ಅವರ ಪ್ರೋತ್ಸಾಹ, ತ್ಯಾಗ ಮತ್ತು ಬೆಂಬಲ ಮಹತ್ವದ ಪಾತ್ರ ವಹಿಸಿತ್ತು. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ವಿಜಯ್ ರಾಘವೇಂದ್ರ ಹಾಗೂ ‘ಉಗ್ರಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಶ್ರೀಮುರಳಿ ಅವರ ಯಶಸ್ಸಿನ ಹಿಂದೆ ತಾಯಿಯ ಪ್ರೇರಣೆ ಮತ್ತು ಆಶೀರ್ವಾದ ಸದಾ ಇತ್ತು ಎಂದು ಕುಟುಂಬದ ಆಪ್ತರು ಸ್ಮರಿಸುತ್ತಿದ್ದಾರೆ.ಜಯಮ್ಮ ಅವರ ನಿಧನದಿಂದ ಚಿನ್ನೇಗೌಡರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ಮಾಪಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಜಯಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಚಿತ್ರರಂಗದ ಗಣ್ಯರು ಪ್ರಾರ್ಥಿಸಿದ್ದಾರೆ.



