ಮಂಗಳೂರು, ಆ. 2: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗೆ ಮಂಗಳೂರಿನ 61 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ 16.2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬಂದ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ಮಹಿಳೆ, ಕೊನೆಗೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ವಂಚನೆ ನಡೆದಿದ್ದು ಹೇಗೆ?
ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಏಪ್ರಿಲ್ನಲ್ಲಿ ಮಹಿಳೆ ಫೇಸ್ಬುಕ್ನಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತೊಂದರ ಲಿಂಕ್ ಕ್ಲಿಕ್ ಮಾಡಿ, ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಂಡಿದ್ದರು. ಯುನೈಟೆಡ್ ಕಿಂಗ್ಡಮ್ ದೇಶದ ಕೋಡ್ ಹೊಂದಿರುವ ಫೋನ್ ಸಂಖ್ಯೆಗಳಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ, ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡಿದ್ದ.
ವಂಚಕನ ಮಾತು ನಂಬಿದ ಮಹಿಳೆ, ಏಪ್ರಿಲ್ 18 ರಂದು ಮೊದಲ ಬಾರಿಗೆ 20,372 ರೂ. ವರ್ಗಾಯಿಸಿದ್ದರು. ತದನಂತರ ಜೂನ್ 12 ರಂದು 3 ಲಕ್ಷ ರೂ., ಜೂನ್ 22 ರಂದು 3 ಲಕ್ಷ ರೂ., ಜೂನ್ 24 ರಂದು 4 ಲಕ್ಷ ರೂ. ಹಾಗೂ ಜೂನ್ 30 ರಂದು 6 ಲಕ್ಷ ರೂ.ನಂತೆ ಹಂತ-ಹಂತವಾಗಿ ಒಟ್ಟು 16.2 ಲಕ್ಷ ರೂ. ಹಣವನ್ನು ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದಾರೆ.
ಪ್ರಕರಣ ದಾಖಲು
ಹಣ ಹಿಂತಿರುಗಿಸುವಂತೆ ಕೇಳಿದಾಗ ಯಾವುದೇ ಪ್ರತಿಫಲ ಸಿಗದೇ ಇದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ತಕ್ಷಣ ಅವರು ಮಂಗಳೂರು ಸಿಇಎನ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ಗಳಲ್ಲಿ ಬರುವ ಅನಧಿಕೃತ ಹೂಡಿಕೆ ಆಮಿಷಗಳ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ಅಪರಿಚಿತ ಟೆಲಿಗ್ರಾಂ ಗ್ರೂಪ್ಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ. ಸೈಬರ್ ವಂಚನೆಗೊಳಗಾದರೆ ತಕ್ಷಣ 1930 ಹೆಲ್ಪ್ಲೈನ್ಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.



