ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ 100ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರದಿಂದ ಸಂಘಟನೆಗೆ ದೊಡ್ಡದೊಂದು ಕಾನೂನಾತ್ಮಕ ಸವಾಲು ಎದುರಾಗಿದೆ. ಕರ್ನಾಟಕದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಮುಖ್ಯಸ್ಥ (ಸರಸಂಘಚಾಲಕ) ಡಾ. ಮೋಹನ್ ಭಾಗವತ್ ಅವರಿಗೆ ಅಧಿಕೃತ ಪತ್ರ ಬರೆದಿದ್ದು, ಸಂಘಟನೆಯ ಕಾನೂನಾತ್ಮಕ ಸ್ಥಾನಮಾನ, ನಿಧಿಯ ಮೂಲಗಳನ್ನು ಪ್ರಶ್ನಿಸಿದ್ದಾರೆ. ಸಂಘಟನೆಯು ಯಾವ ಕಾನೂನಿನ ಆಧಾರದ ಮೇಲೆ ದೇಶ ಮತ್ತು ರಾಜ್ಯದಲ್ಲಿ ಇಷ್ಟೊಂದು ಬೃಹತ್ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂಬುದನ್ನು ವಿವರಿಸಲು “ಅಧಿಕೃತ ಪದಾಧಿಕಾರಿಗಳನ್ನು” ನಿಯೋಜಿಸುವಂತೆ ಪ್ರಿಯಾಂಕ್ ಖರ್ಗೆ ಅವರು ಪತ್ರದ ಮೂಲಕ ಕೋರಿದ್ದಾರೆ.
ಯಾಂಕ್ ಖರ್ಗೆ ಎತ್ತಿರುವ 8 ಪ್ರಮುಖ ಪ್ರಶ್ನೆಗಳು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಯಾವುದೇ ಸಂಘಟನೆಯು ಸಾರ್ವಜನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಪ್ರಿಯಾಂಕ್, 8 ಪ್ರಮುಖ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಆರ್ಎಸ್ಎಸ್ ಮುಖ್ಯಸ್ಥರನ್ನು ಒತ್ತಾಯಿಸಿದ್ದಾರೆ.
* ಕಾನೂನಾತ್ಮಕ ಸ್ಥಾನಮಾನ (Legal Status): ಆರ್ಎಸ್ಎಸ್ ಸಂಘಟನೆಯ ಅಧಿಕೃತ ಕಾನೂನುಬದ್ಧ ಅಸ್ತಿತ್ವದ ಸ್ವರೂಪವೇನು? ಅದು ಟ್ರಸ್ಟ್ ಆಗಿದೆಯೇ, ಸೊಸೈಟಿಯೇ ಅಥವಾ ಬೇರೆ ರೂಪದ್ದೇ?
* ಪದಾಧಿಕಾರಿಗಳ ವಿವರ: ಸಂಘಟನೆಯನ್ನು ಮುನ್ನಡೆಸುತ್ತಿರುವ ಅಧಿಕೃತ ಪದಾಧಿಕಾರಿಗಳು ಮತ್ತು ಕಾನೂನುಬದ್ಧ ಪ್ರತಿನಿಧಿಗಳು ಯಾರು?
* ಆದಾಯದ ಮೂಲ: ಸಂಘಟನೆಗೆ ದೇಶ-ವಿದೇಶಗಳಿಂದ ಹರಿದುಬರುತ್ತಿರುವ ದೇಣಿಗೆಗಳು, ಕಾಣಿಕೆಗಳು ಮತ್ತು ಒಟ್ಟಾರೆ ಆದಾಯದ ಮೂಲಗಳೇನು?
* ಆಸ್ತಿ ಮತ್ತು ವೆಚ್ಚಗಳು: ಆರ್ಎಸ್ಎಸ್ ಹೊಂದಿರುವ ಒಟ್ಟು ಆಸ್ತಿಪಾಸ್ತಿಗಳು (Assets) ಎಷ್ಟು ಮತ್ತು ಅದರ ವಾರ್ಷಿಕ ಖರ್ಚು-ವೆಚ್ಚಗಳ ವಿವರಗಳೇನು?
* ತೆರಿಗೆ ಪಾವತಿಯ ಸ್ಥಿತಿ: ಸಂಘಟನೆಯು ನಿಯಮಿತವಾಗಿ ಆದಾಯ ತೆರಿಗೆ ಸೇರಿದಂತೆ ಅನ್ವಯವಾಗುವ ತೆರಿಗೆಗಳನ್ನು ಪಾವತಿ ಮಾಡುತ್ತಿದೆಯೇ ಅಥವಾ ಇಲ್ಲವೇ?
* ನೋಂದಣಿ ರಹಿತ ಕಾರ್ಯಾಚರಣೆ: ಯಾವುದೇ ಅಧಿಕೃತ ಸರ್ಕಾರಿ ನೋಂದಣಿ ಇಲ್ಲದೆಯೂ ಇಷ್ಟೊಂದು ದಶಕಗಳಿಂದ ಚಟುವಟಿಕೆ ನಡೆಸಲು ಸಂಘಟನೆಗೆ ಇರುವ ಕಾನೂನು ಆಧಾರವೇನು?
* ಸಾರ್ವಜನಿಕ ಜವಾಬ್ದಾರಿ: ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಲೆಕ್ಕ ಒಪ್ಪಿಸದೆ ಇಷ್ಟು ಬೃಹತ್ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಇರುವ ಸಾಂವಿಧಾನಿಕ ಮತ್ತು ಶಾಸನಬದ್ಧ ಚೌಕಟ್ಟು ಯಾವುದು?
* ಕಾರ್ಯಕ್ರಮಗಳ ಅನುಮತಿ: ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲಾಗುವ ಪಥಸಂಚಲನ ಹಾಗೂ ದೊಡ್ಡ ಕಾರ್ಯಕ್ರಮಗಳಿಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತದಿಂದ ಪಡೆದುಕೊಳ್ಳುವ ಅಧಿಕೃತ ಅನುಮತಿಗಳ ವಿವರಗಳೇನು?
ಆರ್ಎಸ್ಎಸ್ ಸಂಸ್ಥೆಯು ಸಮಾಜ ಮತ್ತು ಸಾರ್ವಜನಿಕ ಜೀವನದಲ್ಲಿ ಹೊಂದಿರುವ ಪ್ರಭಾವ ಹಾಗೂ ಬೃಹತ್ ಅಸ್ತಿತ್ವವನ್ನು ಸಚಿವರು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಸಂಘಟನೆಯ ಸ್ವಂತ ವಾರ್ಷಿಕ ವರದಿಯ ಅಂಕಿ-ಅಂಶಗಳನ್ನೇ ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ ಸಂಘಟನೆ ಹೊಂದಿರುವ ವ್ಯಾಪ್ತಿಯನ್ನು ಬಿಚ್ಚಿಟ್ಟಿದ್ದಾರೆ. ಕರ್ನಾಟಕವೊಂದರಲ್ಲೇ ಪ್ರತಿದಿನ 4,127 ಶಾಖೆಗಳು (ಕ್ಯಾಂಪ್ಗಳು) ನಡೆಯುತ್ತಿವೆ. ರಾಜ್ಯದಲ್ಲಿ 1,389 ವಾರಾಂತರದ ಕೂಟಗಳು ಹಾಗೂ 60 ಮಾಸಿಕ ಸಭೆಗಳು ನಡೆಯುತ್ತಿವೆ. (ದೇಶಾದ್ಯಂತ ಒಟ್ಟು 60,000 ಶಾಖೆಗಳಿವೆ). ರಾಜ್ಯದಲ್ಲಿ ಬರೋಬ್ಬರಿ 19.61 ಲಕ್ಷ ಜನರನ್ನು ಒಳಗೊಂಡ 2,194 ಸಮಾಜೋತ್ಸವಗಳನ್ನು ಸಂಘಟಿಸಲಾಗಿದೆ. 2.21 ಲಕ್ಷ ಸಮವಸ್ತ್ರಧಾರಿ ಸ್ವಯಂಸೇವಕರು ಪಾಲ್ಗೊಂಡ 562 ರೂಟ್ ಮಾರ್ಚ್ಗಳನ್ನು (ಪಥಸಂಚಲನ) ನಡೆಸಲಾಗಿದೆ ಎಂದು ವಿವರಿಸಿದ್ದಾರೆ. “ಈ ಅಂಕಿ-ಅಂಶಗಳೇ ಹೇಳುವಂತೆ ಆರ್ಎಸ್ಎಸ್ ಕರ್ನಾಟಕದಾದ್ಯಂತ ಅತ್ಯಂತ ಶಿಸ್ತುಬದ್ಧ ಮತ್ತು ಆಳವಾಗಿ ಬೇರೂರಿರುವ ಬೃಹತ್ ಜಾಲವನ್ನು ಹೊಂದಿದೆ. ಇಷ್ಟೊಂದು ವ್ಯಾಪಕವಾದ ಸಾಂಸ್ಥಿಕ ಅಸ್ತಿತ್ವವನ್ನು ಕೇವಲ ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಆರ್ಎಸ್ಎಸ್ ಅತ್ಯುನ್ನತ ಮಟ್ಟದ ಪಾರದರ್ಶಕತೆ, ಸಾಂವಿಧಾನಿಕ ಬದ್ಧತೆ ಮತ್ತು ಉತ್ತರದಾಯಿತ್ವವನ್ನು ಹೊಂದಿರಬೇಕಾದುದು ಅತ್ಯಗತ್ಯ” ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
‘ಸಫಾಯಿ ಕರ್ಮಚಾರಿಯೇ ನೋಂದಣಿ ಮಾಡಿಸಬೇಕು, ಆರ್ಎಸ್ಎಸ್ ಯಾಕಿಲ್ಲ?’
ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೇ ಹಳೆಯದಾದ, ದೊಡ್ಡದಾದ ಅಥವಾ ಪ್ರಭಾವಶಾಲಿಯಾದ ಸಂಘಟನೆಯಾಗಿದ್ದರೂ ಅದು ಕಾನೂನಿನ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ ಒಬ್ಬ ಸಾಮಾನ್ಯ ಸಫಾಯಿ ಕರ್ಮಚಾರಿ ಕೂಡ ಸರ್ಕಾರದ ಸಣ್ಣ ಸೌಲಭ್ಯ ಪಡೆಯಬೇಕಾದರೂ ಅಧಿಕೃತವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ದೇಶದ ಪ್ರತಿಯೊಂದು ಧಾರ್ಮಿಕ ಸಂಸ್ಥೆ, ಚಾರಿಟಬಲ್ ಟ್ರಸ್ಟ್ ಹಾಗೂ ಸಾರ್ವಜನಿಕೇತರ ಸಂಸ್ಥೆಗಳು ನಿಯಮಿತವಾಗಿ ಆಡಿಟ್ ಮಾಡಿಸಿ ತಮ್ಮ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯ. ಹಾಗಿರುವಾಗ ಆರ್ಎಸ್ಎಸ್ಗೆ ಮಾತ್ರ ಇದು ಅನ್ವಯಿಸುವುದಿಲ್ಲವೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಯಾವ ಸಂಘಟನೆಯು ದೇಶದಾದ್ಯಂತ ಸದಾ ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಬಗ್ಗೆ ಮಾತನಾಡುತ್ತದೆಯೋ, ಆ ಸಂಘಟನೆಯು ಸಾಂವಿಧಾನಿಕ ನಿಯಮಗಳನ್ನು ಗೌರವಿಸುವ ಮೂಲಕ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ತನ್ನ ಮೌಲ್ಯಗಳನ್ನು ಸಮಾಜಕ್ಕೆ ಸಾಬೀತುಪಡಿಸಬೇಕು” ಎಂದು ಆಗ್ರಹಿಸಿದ್ದಾರೆ. ತಮ್ಮ ಪತ್ರದ ಕೊನೆಯಲ್ಲಿ ಆರ್ಎಸ್ಎಸ್ಗೆ ಸಾಂವಿಧಾನಿಕ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕೋರಿರುವ ಖರ್ಗೆ, “ಆರ್ಎಸ್ಎಸ್ ತನ್ನ 100ನೇ ವರ್ಷದಲ್ಲಿ ಭಾರತ ದೇಶಕ್ಕೆ ನೀಡಬಹುದಾದ ಅತ್ಯುತ್ತಮ ಮತ್ತು ನಿಜವಾದ ಕೊಡುಗೆ ಎಂದರೆ, ಅದು ಭಾರತೀಯ ಕಾನೂನಿನ ಅಡಿಯಲ್ಲಿ ತನ್ನನ್ನು ತಾನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವುದು, ತನ್ನ ಎಲ್ಲ ಆರ್ಥಿಕ ವ್ಯವಹಾರಗಳು ಮತ್ತು ಚಟುವಟಿಕೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು, ಅನ್ವಯವಾಗುವ ಎಲ್ಲ ತೆರಿಗೆಗಳನ್ನು ಪಾವತಿಸುವುದು ಹಾಗೂ ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕ ಮತ್ತು ಜವಾಬ್ದಾರಿಯುತ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು” ಎಂದು ತಿಳಿಸಿದ್ದಾರೆ. ಈ ಪತ್ರ ಇದೀಗ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.



