ತುಮಕೂರಿನ ಪ್ರತಿಷ್ಠಿತ ಜ್ಯುವೆಲರಿ ಶಾಪ್ನಲ್ಲಿ 10 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣ ರಾತ್ರೋರಾತ್ರಿ ನಾಪತ್ತೆಯಾಗಿದೆ. ಆದರೆ, ಕಳ್ಳರಂತೂ ಅಂಗಡಿಗೆ ಎಂಟ್ರಿ ಕೊಟ್ಟಿಲ್ಲ! ಮತ್ತೆ ಆಭರಣ ಕಾಣೆಯಾಗಿದ್ದು ಹೇಗೆ? ಕಳ್ಳತನದ ರಹಸ್ಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಬಯಲಾಗಿದ್ದು, ಆಭರಣಗಳನ್ನು ಎಗರಿಸಿದ್ದು ಜನರಲ್ಲ ಎಂಬುದು ಗೊತ್ತಾಗಿದೆ. ಮತ್ಯಾರು? ತಿಳಿಯಲು ಮುಂದೆ ಓದಿ.

ತುಮಕೂರು, ಜುಲೈ 30: ಸಿನಿಮಾ ಕಥೆಯನ್ನೂ ಮೀರಿಸುವಂತಿರುವ ವಿಚಿತ್ರ ಘಟನೆಯೊಂದು ತುಮಕೂರು ನಗರದಲ್ಲಿ ನಡೆದಿದೆ. ಪ್ರತಿಷ್ಠಿತ ಜ್ಯುವೆಲರಿ ಶಾಪ್ನಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ 10 ಲಕ್ಷ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಆದರೆ ಜ್ಯುವೆಲ್ಲರಿಯ ಶಟರ್ ಮುರಿದಿರಲಿಲ್ಲ, ಹೊರಗಿನಿಂದ ಯಾರೂ ಒಳನುಗ್ಗಿದ ಕುರುಹು ಕೂಡ ಇರಲಿಲ್ಲ. ಕೊನೆಗೆ ಸಿಸಿಟಿವಿ ಪರಿಶೀಲಿಸಿದಾಗ ಇಡೀ ಪ್ರಕರಣದ ಅಸಲಿ ರಹಸ್ಯ ಬಯಲಾಗಿದೆ! ತುಮಕೂರು ನಗರದ ಕಾಲ್ಟೆಕ್ಸ್ ಸರ್ಕಲ್ ಸಮೀಪದಲ್ಲಿರುವ ವಿಶ್ವಾಸ್ ಜ್ಯುವೆಲರಿ ಶಾಪ್ನಲ್ಲಿ ಈ ಘಟನೆ ನಡೆದಿದೆ.
ಅಂಗಡಿಯಲ್ಲಿ 50 ಗ್ರಾಂಗೂ ಅಧಿಕ ತೂಕದ ವಜ್ರ ಹಾಗೂ ಚಿನ್ನಾಭರಣಗಳು ಬೆಳಗ್ಗೆ ನೋಡುವಾಗ ಕಾಣೆಯಾಗಿದ್ದವು. ಸರಗಳು ಮತ್ತು ಉಂಗುರಗಳು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಆಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.
ಸಿಸಿಟಿವಿ ಪರಿಶೀಲಿಸಿದಾಗ ಗೊತ್ತಾಯ್ತು ಅಚ್ಚರಿಯ ಸತ್ಯ
ಕಳ್ಳತನವಾಗಿರಬಹುದು ಎಂದು ಅನುಮಾನಗೊಂಡ ಸಿಬ್ಬಂದಿ, ಪೊಲೀಸ್ ಠಾಣೆಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಂಡ ದೃಶ್ಯ ನೋಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಅಚ್ಚರಿಯಾಗಿದೆ.
ಆಭರಣ ಎಗರಿಸಿದ್ದು ‘ಕಳ್ಳ’ ಇಲಿ!
ಸಿಸಿಟಿವಿ ದೃಶ್ಯದಲ್ಲಿ ಒಂದು ಇಲಿ ಅಂಗಡಿಯೊಳಗೆ ಸದ್ದಿಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಬಳಿಕ ಅದೇ ಇಲಿ ಚಿನ್ನಾಭರಣಗಳನ್ನು ಎಳೆದೊಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳನ್ನು ಎಗರಿಸಿದ ಇಲಿ, ಅವುಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿಟ್ಟಿತ್ತು.
ಬಿಲ ತೋಡಿದಾಗ ಸಿಕ್ತು ಕಳವಾದ ಆಭರಣ
ಇಲಿಯ ಜಾಡು ಹಿಡಿದ ಜ್ಯುವೆಲರಿ ಶಾಪ್ ಸಿಬ್ಬಂದಿ, ಅದು ಸೇರಿಕೊಂಡಿದ್ದ ಬಿಲವನ್ನು ಪತ್ತೆಹಚ್ಚಿದ್ದಾರೆ. ಬಳಿಕ ಬಿಲವನ್ನು ತೋಡಿದಾಗ ನಾಪತ್ತೆಯಾಗಿದ್ದ ಆಭರಣಗಳು ಅಲ್ಲಿ ಪತ್ತೆಯಾಗಿವೆ. ಒಂದೆರಡು ಆಭರಣಗಳಲ್ಲ, ಬರೋಬ್ಬರಿ 10 ಉಂಗುರಗಳು ಹಾಗೂ 3 ಸರಗಳನ್ನು ಇಲಿ ತನ್ನ ಬಿಲದಲ್ಲಿ ಇಟ್ಟುಕೊಂಡಿತ್ತು. ಆಭರಣಗಳು ಸುರಕ್ಷಿತವಾಗಿ ವಾಪಸ್ ಸಿಕ್ಕಿದ್ದರಿಂದ ಜ್ಯುವೆಲರಿ ಶಾಪ್ ಮಾಲೀಕರು ಹಾಗೂ ಸಿಬ್ಬಂದಿ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಪೂರ್ಣ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಚಿತ್ರ ‘ಕಳ್ಳತನ’ ಪ್ರಕರಣದ ವಿಡಿಯೋ ಗಮನ ಸೆಳೆಯುತ್ತಿದೆ.



