ಮಂಗಳೂರು, ಸೆ.13: ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ನಡೆಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸೂಕ್ಷ್ಮ ಮಾರ್ಗಗಳು ಹಾಗೂ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.


ಉಡುಪಿ ಜಿಲ್ಲೆಯಲ್ಲಿ ಒಟ್ಟು 492 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ನಡೆಯಲಿದೆ. ಭದ್ರತಾ ದೃಷ್ಟಿಯಿಂದ 415 ಸ್ಥಳಗಳನ್ನು ಸಾಮಾನ್ಯ, 74 ಸ್ಥಳಗಳನ್ನು ಸೂಕ್ಷ್ಮ ಹಾಗೂ ಮೂರು ಸ್ಥಳಗಳನ್ನು ಅತಿಸೂಕ್ಷ್ಮ ಎಂದು ವರ್ಗೀಕರಿಸಲಾಗಿದೆ.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಪೊಲೀಸರು 22 ಶಾಂತಿ ಸಮಿತಿ ಸಭೆಗಳನ್ನು ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ 611 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ವಿವಿಧ ಕಾನೂನುಗಳ ಅಡಿಯಲ್ಲಿ 487 ವ್ಯಕ್ತಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 230 ಸಾರ್ವಜನಿಕ ಗಣೇಶೋತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ.
ಬೆಳ್ತಂಗಡಿ ಉಪವಿಭಾಗದಲ್ಲಿ ಅತಿ ಹೆಚ್ಚು
ಬೆಳ್ತಂಗಡಿ ಉಪವಿಭಾಗದಲ್ಲಿ ಅತಿ ಹೆಚ್ಚು 103 ಗಣೇಶೋತ್ಸವ ಪ್ರತಿಷ್ಠಾಪನೆಗಳು ನಡೆಯಲಿವೆ. ಇದರಲ್ಲಿ ಬೆಳ್ತಂಗಡಿಯಲ್ಲಿ 25, ಧರ್ಮಸ್ಥಳದಲ್ಲಿ 20, ವೇಣೂರಿನಲ್ಲಿ 20, ಉಪ್ಪಿನಂಗಡಿಯಲ್ಲಿ 18, ಕಡಬದಲ್ಲಿ 13 ಹಾಗೂ ಪುಂಜಾಲಕಟ್ಟೆಯಲ್ಲಿ 7 ಪ್ರತಿಷ್ಠಾಪನೆಗಳು ಸೇರಿವೆ.ಪುತ್ತೂರು ಉಪವಿಭಾಗದಲ್ಲಿ ಒಟ್ಟು 79 ಪ್ರತಿಷ್ಠಾಪನೆಗಳು ನಡೆಯಲಿದ್ದು, ಬೆಳ್ಳಾರೆಯಲ್ಲಿ 18, ಪುತ್ತೂರು ಗ್ರಾಮಾಂತರ ಹಾಗೂ ಸುಳ್ಯದಲ್ಲಿ ತಲಾ 17, ಪುತ್ತೂರು ನಗರದಲ್ಲಿ 16 ಮತ್ತು ಸುಬ್ರಹ್ಮಣ್ಯದಲ್ಲಿ 11 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಬಂಟ್ವಾಳ ಉಪವಿಭಾಗದಲ್ಲಿ ಒಟ್ಟು 48 ಗಣೇಶೋತ್ಸವ ಪ್ರತಿಷ್ಠಾಪನೆಗಳಿಗೆ ಸಿದ್ಧತೆ ನಡೆಸಲಾಗಿದೆ. ಇದರಲ್ಲಿ ವಿಟ್ಲದಲ್ಲಿ 20, ಬಂಟ್ವಾಳ ಗ್ರಾಮಾಂತರದಲ್ಲಿ 16 ಹಾಗೂ ಬಂಟ್ವಾಳ ನಗರದಲ್ಲಿ 12 ಪ್ರತಿಷ್ಠಾಪನೆಗಳು ನಡೆಯಲಿವೆ.
ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಅಧಿಕೃತವಾಗಿ ನಿಗದಿಪಡಿಸಿರುವ ಮಾರ್ಗಗಳು ಹಾಗೂ ಅನುಮೋದಿತ ಸ್ಥಳಗಳಲ್ಲೇ ನಡೆಸುವಂತೆ ಉಡುಪಿ ಜಿಲ್ಲಾ ಪೊಲೀಸರು ಸಂಘಟಕರಿಗೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.ಗಣೇಶೋತ್ಸವ ಮೆರವಣಿಗೆಗಳಿಂದ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾರ್ವಜನಿಕರು ಹಾಗೂ ಆಯೋಜಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ, ಪ್ರಚೋದನಕಾರಿ ಘೋಷಣೆಗಳನ್ನು ಕೂಗದಂತೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.



