ನಮ್ಮ ದೇಶದಲ್ಲಿ ಭಕ್ತರ ಸಂಖ್ಯೆ ಹೆಚ್ಚು. ಅದೇನೂ ಪರವಾಗಿಲ್ಲ. ಆದರೆ ಕಣ್ಣ ಮುಂದೆ ನಡೆಯುತ್ತಿರುವುದರ ಅರ್ಥ ತಿಳಿದುಕೊಳ್ಳದೆ ತಾವೂ ಅದನ್ನು ಆಚರಿಸಲು ಹೋಗುವ ಮೂಢಭಕ್ತರ ಸಂಖ್ಯೆಯೂ ಹೆಚ್ಚು. ಸನಿಹದ ದೇವಾಲಯಗಳಿಗೆ ಹೋದರೆ ನಿಮಗೇ ಗೊತ್ತಾಗುತ್ತದೆ. ಇದು ಅಂಥದೊಂದು ವಿಡಿಯೋ. ಇಲ್ಲೊಬ್ಬಳು ಆಂಟಿ ದಢೂತಿ ದೇಹ ಹೊಂದಿದ್ದರೂ ದೇವಾಲಯದ ಕಲ್ಲಿನ ಸಂದಿಯ ನಡುವೆ ತೂರಲು ಹೋಗಿ ಪ್ರಾಣವೇ ಹೋಗುವಂತೆ ವೇದನೆಪಟ್ಟಿದ್ದಾಳೆ. ಮೂಲಗಳ ಪ್ರಕಾರ, ಇದೇ ಜಾಗದಲ್ಲಿ ಹಿಂದೆ ಒಬ್ಬ ಭಕ್ತನ ಜೀವವೇ ಹೋಗಿದೆ.

ಇದು ನಡೆದಿರುವುದು ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ. ಅಲ್ಲಿನ ಅರುಣಾಚಲ ಗಿರಿಯ ದಕ್ಷಿಣ ಮಾರ್ಗದಲ್ಲಿ ‘ಮೋಕ್ಷ ಮಾರ್ಗ’ ಎಂಬ ಕಿರಿದಾದ ಬಂಡೆಯ ಸಂದಿಯ ಹಾದಿಯೊಂದಿದೆ. ಅಲ್ಲಿ ತೂರಿ ಬಂದರೆ ಪುಣ್ಯ ಸಿಗುತ್ತದೆ, ಆತ/ಕೆ ನೇರವಾಗಿ ಮೋಕ್ಷಕ್ಕೆ ಸಲ್ಲುತ್ತಾರೆ ಎಂಬ ನಂಬಿಕೆ ಹೇಗೋ ಹುಟ್ಟಿಕೊಂಡಿದೆ. ಸಪೂರ ಶರೀರ ಇರುವವರು ಅಲ್ಲಿ ಹೇಗೋ ತೂರಬಹುದು. ದಪ್ಪ ಇರುವವರು ಹೋದರೆ ಕಷ್ಟ.
ಕೆಲವೇ ದಿನಗಳ ಹಿಂದೆ, ಆಂಧ್ರಪ್ರದೇಶದ ರಾಜಮಹೇಂದ್ರವರಂ ಮೂಲದ 36 ವರ್ಷದ ಮಣಿಕುಮಾರ್ ಎಂಬವರು ಅಲ್ಲಿ ತೂರಲು ಹೋಗಿ ಸಿಲುಕಿಕೊಂಡಿದ್ದರು. ಆಗ ಉಸಿರಾಟದ ತೀವ್ರ ತೊಂದರೆಗೆ ಒಳಗಾದ ಅವರು ಬಳಿಕ ಮೃತಪಟ್ಟಿದ್ದರು. ಈ ದುರಂತ ಸಂಭವಿಸಿ ಕೆಲವೇ ದಿನಗಳಾಗಿರುವಾಗ, ಅದೇ ಸ್ಥಳದಲ್ಲಿ ಮತ್ತೊಂದು ಘಟನೆ. ಆಂಧ್ರಪ್ರದೇಶದ ಮಹಿಳೆಯೊಬ್ಬರು ಅದೇ ಕಿರಿದಾದ ಬಂಡೆಯ ಹಾದಿಯಲ್ಲಿ ಸಿಲುಕಿಕೊಂಡರು. ಅಲ್ಲಿದ್ದ ಭಕ್ತರು ಸಮಯಕ್ಕೆ ಸರಿಯಾಗಿ ಅವರನ್ನು ಹೊರಗೆಳೆದು ತೆಗೆದ ಕಾರಣ, ಮತ್ತೊಂದು ಜೀವಹಾನಿ ತಪ್ಪಿತು. ಈ ವಿಡಿಯೊ, ಮತ್ತೊಂದು ದುರಂತ ಎಷ್ಟು ಸಮೀಪದಲ್ಲಿ ಇತ್ತೆಂಬುದನ್ನು ತೋರಿಸುತ್ತದೆ.
ಈ ತೀರಾ ಕಿರಿದಾದ ಬಂಡೆಯ ಬಿರುಕಿನ ಮೂಲಕ ತೆವಳಿಕೊಂಡು ಹೋದರೆ ಮೋಕ್ಷ, ಅಂದರೆ ಜನನ-ಮರಣದ ಚಕ್ರದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಅದಕ್ಕೇ ಈ ಸ್ಥಳವನ್ನು ಯಾರೋ ‘ಮೋಕ್ಷ ಮಾರ್ಗ’ ಎಂದು ಕರೆದರು. ನಂತರ ಅಲ್ಲಿ ಬಂದವರೆಲ್ಲ ಹಾಗೇ ಮಾಡತೊಡಗಿದ್ದರಿಂದ ಇಲ್ಲಿ ನುಸಿಯುವ ಭಕ್ತರ ಸಂಖ್ಯೆ ಹೆಚ್ಚಿತು. ವಾಸ್ತವವಾಗಿ ಈ ನಂಬಿಕೆಗೆ ಯಾವುದೇ ಹಿನ್ನೆಲೆ ಇದ್ದಂತಿಲ್ಲ.
ದೇಹವನ್ನು ಬಲವಂತವಾಗಿ ಕಿರಿದಾದ ಬಂಡೆಯ ಬಿರುಕಿನೊಳಗೆ ನುಗ್ಗಿಸುವುದಕ್ಕೂ, ಮೋಕ್ಷವನ್ನು ಪಡೆಯುವುದಕ್ಕೂ ಏನು ಸಂಬಂಧ? ಮೋಕ್ಷ ಎಂಬುದೊಂದು ಆಧ್ಯಾತ್ಮಿಕ ಸ್ಥಿತಿ. ಆತ್ಮ ಸಾಕ್ಷಾತ್ಕಾರದಿಂದ, ಆಂತರಿಕ ಪರಿವರ್ತನೆಯಿಂದ ದೊರೆಯುವ ಸ್ಥಿತಿ. ಮೋಕ್ಷ ಇಂತಹ ದೈಹಿಕ ಕ್ರಿಯೆಯಿಂದ ಸಿಗುತ್ತದೆ ಎಂದು ಯಾರಾದರೂ ಹೇಳಿದರೆ ಹಾಸ್ಯಾಸ್ಪದ. ಈ ನಂಬಿಕೆ ಎಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬುದು ಇಂಥ ದುರಂತಗಳಿಂದ ವೇದ್ಯ.
ಅರುಣಾಚಲ ಅತ್ಯಂತ ಆಧ್ಯಾತ್ಮಿಕ ಸ್ಥಳ. ಅಲ್ಲಿ ಭಾರತದ ದಿವ್ಯ ಸಂತರಲ್ಲಿ ಒಬ್ಬರಾದ ರಮಣ ಮಹರ್ಷಿಗಳು ನೆಲೆಸಿದ್ದರು. ಇಂದಿಗೂ ಅಲ್ಲಿ ಅವರ ಆಶ್ರಮ ಇದೆ. ಅಲ್ಲಿ ಹೋಗಿ ಸುಮ್ಮನೆ ಕುಳಿತರೂ ಸಾಕು, ಮನಸ್ಸಿಗೆ ಆಹ್ಲಾದ ಉಂಟಾಗುತ್ತದೆ. ಧ್ಯಾನ ಮಾಡಿದರೆ ಇನ್ನೊಂದು ಹಂತಕ್ಕೆ ಏರುತ್ತೀರಿ. ಅಲ್ಲೇ ಅವರು ತಪಸ್ಸು ಮಾಡಿದ ಅರುಣಾಚಲ ಬೆಟ್ಟವಿದೆ. ಅದಕ್ಕೆ ಪ್ರದಕ್ಷಿಣೆ ಬಂದರೆ ಮಹಾಪುಣ್ಯ ಎಂಬ ನಂಬಿಕೆ. ಇದನ್ನು ಗಿರಿಪ್ರದಕ್ಷಿಣೆ ಎನ್ನುತ್ತಾರೆ. ಹುಣ್ಣಿಮೆಯಂದು ರಾತ್ರಿ ಇಲ್ಲಿ ಲಕ್ಷಾಂತರ ಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ಆಗ ಅಲ್ಲಿ ನೂರಾರು ಸಿದ್ಧರು, ಯೋಗಿಗಳು, ಸನ್ಯಾಸಿಗಳು ದಾರಿಯುದ್ದಕ್ಕೂ ಸಿಗುತ್ತಾರೆ. ಬೆಟ್ಟದಲ್ಲಿರುವ ಸ್ಕಂದಾಶ್ರಮ, ರಮಣ ಮಹರ್ಷಿಗಳು ತಪಸ್ಸು ಮಾಡಿದ ದಿವ್ಯ ತಾಣ. ಅಲ್ಲಿಗೆ ಭೇಟಿ ನೀಡಿ ಧ್ಯಾನ ಮಾಡಬಹುದು. ಇದೇ ಪಟ್ಟಣದಲ್ಲೇ ಇರುವ ಅರುಣಾಚಲೇಶ್ವರದ ಬೃಹತ್ ದೇವಾಲಯ ಕೂಡ ಆಧ್ಯಾತ್ಮಿಕ ಅನುಭೂತಿ ನೀಡುವ ದಿವ್ಯಸನ್ನಿಧಿ. ನಮ್ಮ ಪವಿತ್ರ ತಾಣಗಳಲ್ಲಿ – ಮಸೀದಿ, ಚರ್ಚುಗಳನ್ನೂ ಸೇರಿಸಿಕೊಂಡು ಈ ಮಾತು – ಇಂಥ ಕುರುಡು ನಂಬಿಕೆಯ ಆಚರಣೆಗಳು ಹಲವು ಕಡೆ ನಡೆಯುತ್ತವೆ. ಯಾರೋ ನದಿಯಲ್ಲಿ ಸ್ನಾನ ಮಾಡಿ ಅಲ್ಲೇ ದಡದಲ್ಲಿ ನಾಲ್ಕು ಕಲ್ಲನ್ನು ಒಂದರ ಮೇಲೆ ಒಂದಿಟ್ಟು ಹೋಗುತ್ತಾರೆ. ಹಾಗೆ ಮಾಡಿದರೆ ಪುಣ್ಯ ಎಂದು ಯಾರೋ ಸುದ್ದಿ ಹಬ್ಬಿಸುತ್ತಾರೆ. ನಂತರ ಬಂದವರೂ ಅದೇಕೆ, ಏನು ನಂಬಿಕೆಯ ಮೂಲ, ಅದೆಲ್ಲ ನಿಜವಾ ಎಂದು ಯೋಚನೆ ಮಾಡದೆ ತಾವೂ ಕಟ್ಟುತ್ತಾರೆ. ದೇವಾಲಯದಲ್ಲಿರುವ ಬಾವಿಗೆ ನಾಣ್ಯ ಎಸೆಯುವುದು, ದರ್ಶನಕ್ಕೆ ನಿಲ್ಲುವ ರೈಲಿಂಗ್ಗಳಲ್ಲಿ ನಾಣ್ಯ ಅಂಟಿಸುವುದು ಕೂಡ ಇಂಥದೇ ಒಂದು ನಂಬಿಕೆ.
ಮನಸ್ಸಿಗೆ ಶಾಂತಿ ದೊರೆಯಬೇಕಿದ್ದರೆ ದೇವರ ದರ್ಶನ ಮಾಡಿ. ಪುಣ್ಯ ದೊರೆಯಬೇಕಿದ್ದರೆ ಬಡವರಿಗೆ ಸಹಾಯ ಮಾಡಿ. ಹೊಟ್ಟೆ ಜೊತೆಗೆ ಮನಸ್ಸು ತುಂಬಬೇಕಿದ್ದರೆ ಪ್ರಸಾದ ಭೋಜನ ಮಾಡಿ. ಆರೋಗ್ಯ ದೊರೆಯಬೇಕಿದ್ದರೆ ಹಿತಮಿತ ಆಹಾರ, ಯೋಗಾಭ್ಯಾಸ, ನಿದ್ರೆ ಮಾಡಿ. ಮೋಕ್ಷ ದೊರೆಯಬೇಕಿದ್ದರೆ ಸರಿಯಾದ ಗುರುಗಳ ದರ್ಶನ ಪಡೆದು, ನಿರಂತರ ಸಾಧನೆಯ ಮೂಲಕ ಆತ್ಮಾನುಭವ ಸಂಪಾದಿಸಿ. ರೋಗಮುಕ್ತರಾಗಬೇಕಿದ್ದರೆ ವೈದ್ಯರ ಹಾಗೂ ಭವರೋಗ್ಯ ವೈದ್ಯರ ಸಹಾಯ ಪಡೆಯಿರಿ. ಇದೆಲ್ಲ ಮಾಡುವಾಗ, ನಂಬಿಕೆ ಹಾಗೂ ಕುರುಡು ನಂಬಿಕೆಯ ನಡುವಿನ ವ್ಯತ್ಯಾಸ ಗೊತ್ತಿರಲಿ ಎನ್ನುತ್ತಾರೆ ಆಸ್ತಿಕರು.



