ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನವು ಅತ್ಯಂತ ಮಹತ್ವದ ಹಂತವಾಗಿದೆ. ಈ ಅವಧಿಯಲ್ಲಿ ರೂಢಿಸಿಕೊಳ್ಳುವ ಅಭ್ಯಾಸಗಳು ಭವಿಷ್ಯವನ್ನು ರೂಪಿಸುತ್ತವೆ. ಯಶಸ್ವಿ ವಿದ್ಯಾರ್ಥಿಯಾಗಲು ಕೇವಲ ಅದೃಷ್ಟವಷ್ಟೇ ಸಾಲದು. ಶಿಸ್ತು, ಸಂಯಮ, ತಾಳ್ಮೆ, ಸಹನೆ ಮತ್ತು ಆಲೋಚನಾ ಶಕ್ತಿಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ. ಉದಾಸೀನತೆ ಹಾಗೂ ನಿರ್ಲಕ್ಷ್ಯ ಸ್ವಭಾವಗಳು ಯಶಸ್ಸಿಗೆ ಅಡ್ಡಿಯಾಗುತ್ತವೆ. ವಿದ್ಯಾದದಾತಿ ವಿನಯಂ ಎಂಬಂತೆ, ವಿದ್ಯೆಯು ವಿನಯವನ್ನು ನೀಡುತ್ತದೆ. ವಿನಯವು ಅರ್ಹತೆಯನ್ನು, ಅರ್ಹತೆಯು ಸಂಪತ್ತನ್ನು ಮತ್ತು ಸಂಪತ್ತು ಸುಖಮಯ ಜೀವನವನ್ನು ತರುತ್ತದೆ. ಆದರ್ಶ ವಿದ್ಯಾರ್ಥಿಯು ಸೂರ್ಯೋದಯಕ್ಕೆ ಮುನ್ನ ಏಳಬೇಕು, ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಬಾಲ್ಯದಿಂದಲೇ ಪೋಷಕರು ಮತ್ತು ಶಿಕ್ಷಕರು ಉತ್ತಮ ಸಂಸ್ಕಾರಗಳನ್ನು ಕಲಿಸುವುದು ಮುಖ್ಯ. ಜ್ಞಾನ ಸಂಪಾದನೆಗೆ ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವುದು ಯಶಸ್ಸಿಗೆ ದಾರಿಯಾಗುತ್ತದೆ.





