ಮಂಗಳೂರು, ಜು. 26: ಮಂಗಳೂರಿನಲ್ಲಿ ಸಮಾಜ ಸೇವೆ ಮಾಡುವುದಾಗಿ ಬಿಂಬಿಸಿಕೊಂಡಿದ್ದ ವ್ಯಕ್ತಿಯೋವರ್ವ ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ.

ಜಲೀಲ್ ಬಾಬಾ ಎಂಬಾತ ಆರೋಪಿಯಾಗಿದ್ದು, ಈತ ತನ್ನ ಆ್ಯಂಬುಲೆನ್ಸ್ ಅನ್ನೇ ಡ್ರಗ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ. ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್ ಲಿಂಕ್ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ ಐದು ಕೋಟಿ ಮೌಲ್ಯದ ಐದು ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು.
ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಅರೆಸ್ಟ್ ಆಗಿದ್ದರು. ಬಂಧಿತ ಮೂವರು ಲೋಕಲ್ ಪೆಡ್ಲರ್ ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಬಗ್ಗೆ ಸ್ಪೋಟಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದ್ದು, ಸದ್ಯ ಬಂಧಿತರ ಬಗ್ಗೆ ಮಂಗಳೂರು ಕೋರ್ಟ್ಗೆ ಪೊಲೀಸರು ವರದಿ ನೀಡಿದ್ದಾರೆ. ಕಳೆದ ಎಂಟು ದಿನಗಳಿಂದ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಎಸ್ಕೇಪ್ ಆಗಿರೋ ಬಗ್ಗೆಯೂ ಮಾಹಿತಿ ನೀಡಲಾಗಿದೆ.



