ಅಮ್ರೋಹಾ, ಜುಲೈ 26: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ದೇವಾಲಯವೊಂದರಲ್ಲಿ ಮೂವರು ಮಹಿಳೆಯರು ಒಂದೇ ವ್ಯಕ್ತಿಯನ್ನು ವಿವಾಹ ವಾಗುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ಕಾನೂನು ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

ಮದುವೆಯಾದ ಮಹಿಳೆಯರನ್ನು ಅಮ್ರೋಹಾದ ಧೋರಿಯಾ ಗ್ರಾಮದ ಸರೋಜ್, ಸಾವಿತ್ರಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ. ಸರೋಜ್ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದರೆ, ಸಾವಿತ್ರಿ ಮತ್ತು ಸಂತೋಷ್ 12ನೇ ತರಗತಿ ಪೂರ್ಣಗೊಳಿಸಿದ್ದಾರೆ. ಇವರಲ್ಲಿ ಇಬ್ಬರು ಸ್ವಂತ ಸಹೋದರಿಯರು ಹಾಗೂ ಮತ್ತೊಬ್ಬರು ಸೋದರಸಂಬಂಧಿಯಾಗಿದ್ದು, ಮೂವರೂ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಬೆಳೆದಿದ್ದಾರೆ. ವರ ವಿಕಾಸ್ ಎಂಬಾತ ಈ ಮಹಿಳೆಯರ ಸೋಶಿಯಲ್ ಮೀಡಿಯಾ ವೀಡಿಯೊಗಳಿಗೆ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದನು.
ಒಂದೇ ವ್ಯಕ್ತಿಯನ್ನು ಮೂವರನ್ನು ಮದುವೆಯಾಗಲು ಕಾರಣವೇನು?
ತಾವು ಬಾಲ್ಯದಿಂದಲೂ ಒಂದಾಗಿ ಬೆಳೆದಿದ್ದು, ಮದುವೆಯ ನಂತರ ಬೇರೆಯಾಗಲು ಇಷ್ಟವಿರಲಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ. ಕುಟುಂಬದವರು ಬೇರೆ ಬೇರೆ ಕಡೆ ಮದುವೆ ಮಾಡಲು ಹೊರಟಾಗ, ಬೇರೆಯಾಗುವ ಬದಲು ಜೀವ ಕಳೆದುಕೊಳ್ಳಲು ಯೋಚಿಸಿದ್ದೆವು. ನಂತರ ಮೂವರೂ ಒಟ್ಟಾಗಿ ವಿಕಾಸ್ನನ್ನು ಮದುವೆಯಾಗಲು ನಿರ್ಧರಿಸಿದೆವು ಎಂದು ಅವರು ಹೇಳಿದ್ದಾರೆ. ತಮ್ಮ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡದಂತೆ ಮನವಿ ಮಾಡಿರುವ ಅವರು, “ಪ್ರಾಚೀನ ಕಾಲದಲ್ಲಿ ರಾಜ ದಶರಥನಿಗೂ ಮೂವರು ರಾಣಿಯರಿದ್ದರು, ಹಾಗಿದ್ದಾಗ ನಮ್ಮ ಮದುವೆ ತಪ್ಪಾಗುವುದೇಗೆ? ಎಂದು ಪ್ರಶ್ನಿಸಿದ್ದಾರೆ.
ದೇವಾಲಯದ ಆಡಳಿತ ಮಂಡಳಿ ಸ್ಪಷ್ಟನೆ
ಹಸನ್ಪುರದ ಮಾ ಚಾಮುಂಡಾ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆಯಾದರೂ, ದೇವಾಲಯದ ಆಡಳಿತ ಮಂಡಳಿಯು ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ದೇವಾಲಯದಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದಾಗ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದೆ.
ಹಿಂದೂ ಕಾನೂನು ಏನು ಹೇಳುತ್ತದೆ?
ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಆದರೆ, 1955ರ ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಮೊದಲ ಪತ್ನಿ ಜೀವಂತವಾಗಿರುವಾಗ ಅಥವಾ ಕಾನೂನಾತ್ಮಕ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಕಾನೂನುಬಾಹಿರ ಹಾಗೂ ಅನೂರ್ಜಿತ.



