ಬೆಳ್ತಂಗಡಿ: ತಾಲೂಕಿನ ಓಡಿಲ್ನಾಳ ಗ್ರಾಮದ ಸುಮಂತ್ ಎಂಬ ಬಾಲಕ ಸುಮಾರು 5 ತಿಂಗಳ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಘಟನೆಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ಅವರು ಮೃತ ಬಾಲಕ ಸುಮಂತ್ ಅವರ ಪೋಷಕರೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ಪ್ರಕರಣದ ಪ್ರಗತಿ ಹಾಗೂ ಇದುವರೆಗಿನ ತನಿಖೆಯ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲೂ ನಿಷ್ಪಕ್ಷಪಾತ ಹಾಗೂ ಸಮಗ್ರ ರೀತಿಯಲ್ಲಿ ತನಿಖೆ ನಡೆಸಿ ಆದಷ್ಟು ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಕೋರಲಾಯಿತು.
ಕುಟುಂಬಕ್ಕೆ ನ್ಯಾಯ ಸಿಗದಿರುವುದು ನೋವಿನ ಸಂಗತಿ
ಸಮಗ್ರ ಹಾಗೂ ಷ್ಪಕ್ಷಪಾತ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಈ ಹಿಂದೆ ವಿಧಾನಮಂಡಲ ಅಧಿವೇಶನದಲ್ಲಿಯೇ ವಿಷಯವನ್ನು ಪ್ರಸ್ತಾಪಿಸಿದ್ದೆ. ಅಲ್ಲದೇ, ಈ ಪ್ರಕರಣದ ಬಗ್ಗೆ ಮಾನ್ಯ ಗೃಹಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಸೂಕ್ತ ತಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದೆ. ಆದಾಗ್ಯೂ, ಇಷ್ಟೊಂದು ಸಮಯ ಕಳೆದರೂ ಕುಟುಂಬಕ್ಕೆ ನ್ಯಾಯ ದೊರಕದಿರುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ. ನಿರಪರಾಧಿ ಬಾಲಕನ ಸಾವಿನ ಪ್ರಕರಣದಲ್ಲಿ ಸತ್ಯ ಹೊರಬಂದು ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಪ್ರಯತ್ನ ಕುಟುಂಬಸ್ಥರೊಂದಿಗೆ ನಿರಂತರವಾಗಿರಲಿದೆ ಎಂದಿದ್ದಾರೆ.





