ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ವಾದಗಳು ಏಳುವುದು ಸಾಮಾನ್ಯ. ಗಂಡ-ಹೆಂಡತಿ ಮಧ್ಯೆ ಏನೇ ಜಗಳ ಆಗಲಿ ಇಲ್ಲಿ ಕೇಳಿ ಬರುವ ಸರ್ವೆ ಸಾಮಾನ್ಯ ಆರೋಪ ಎಂದರೆ ಹೆಂಡತಿ ಸಣ್ಣ ಸಣ್ಣ ವಿಷಯಕ್ಕೂ ಹಠ ಮಾಡುತ್ತಾಳೆ ಎನ್ನುವುದು. ಆಕೆಯ ಹಠದಿಂದಲೇ ಮನೆಯಲ್ಲಿ ಸದಾ ಜಗಳವಾಗುತ್ತಿರುತ್ತದೆ ಎನ್ನುವುದು ಬಹುತೇಕ ಪುರುಷರ (ಮಂದಿ) ದೂರಾಗಿರುತ್ತದೆ.

ಆದರೆ ಈ ಬಗ್ಗೆ ಆಚಾರ್ಯ ಚಾಣಕ್ಯ ಹೇಳುವುದೇ ಬೇರೆ. ಮನೆಯಲ್ಲಿ ಆಗುವ ಪ್ರತಿಯೊಂದು ಜಗಳಕ್ಕೂ ಗಂಡ ಹೆಂಡತಿಯೇ ಕಾರಣವಾಗಬೇಕಿಲ್ಲ. ಕೆಲವೊಮ್ಮೆ, ಹೊರಗಿನವರ ಹಸ್ತಕ್ಷೇಪವೇ ಈ ಜಗಳಕ್ಕೆ ಕಾರಣವಾಗಿರುತ್ತದೆ. ಎಷ್ಟೋ ಬಾರಿ ಹೊರಗಿನವರ ಮಾತು ಕೇಳಿಕೊಂಡು ಸಂಸಾರ ಹಾಳು ಮಾಡಿಕೊಳ್ಳುವುದಿದೆ.
ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ತಮ್ಮ ಸ್ನೇಹಿತರು ಹೇಳುವ ಮಾತುಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಆದ್ದರಿಂದ, ಪ್ರತಿಯೊಬ್ಬ ಗಂಡನು ತನ್ನ ಹೆಂಡತಿ ಯಾರೊಂದಿಗೆ ಹೇಗೆ ವರ್ತಿಸುತ್ತಾಳೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಇಲ್ಲಿ ಹೆಂಡತಿಯ ಸ್ನೇಹ ಯಾರೊಂದಿಗೆ ಇದೆ ಎನ್ನುವುದು ಬಹಳ ಮುಖ್ಯವಂತೆ. ಮನೆ ಅಥವಾ ದಾಂಪತ್ಯ ಜೀವನದಲ್ಲಿ ಉಂಟಾಗುವ ಕಲಹಕ್ಕೆ ಪತ್ನಿಯ ಸ್ನೇಹಿತರು ಕಾರಣರಾಗುತ್ತಾರೆಯಂತೆ.
ಪತ್ನಿಯು ಈ ಸ್ನೇಹಿತರಿಂದ ದೂರವಿರಬೇಕು
ಯಾರೇ ಆಗಲಿ ಜೀವನದಲ್ಲಿ ಯಶಸ್ಸು ಬೇಕು ಎಂದದರೆ ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಜನರಿಂದ ದೂರವಿರುವುದು ಮುಖ್ಯ. ಚಾಣಕ್ಯ ನೀತಿಯ ಪ್ರಕಾರ, ಒಬ್ಬ ಮಹಿಳೆಯ ಸ್ನೇಹಿತೆಯ ನಡವಳಿಕೆ ಚೆನ್ನಾಗಿಲ್ಲದಿದ್ದರೆ ಅಥವಾ ಅವಳ ಅಭ್ಯಾಸಗಳು ಕೆಟ್ಟದ್ದಾಗಿದ್ದರೆ, ತಕ್ಷಣ ಅವರನ್ನು ದೂರವಿಡಬೇಕು. ಕೆಲವರು ಯಾವಾಗಲೂ ಕುಟುಂಬದ ಗೌರವವನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ. ಇವರಿಗೆ ಕುಟುಂಬದಲ್ಲಿನ ಆಗು ಹೋಗುಗಳು ಮುಖ್ಯವಾಗುವುದೇ ಇಲ್ಲ. ಅವರು ತಮ್ಮ ಸಾಂಸಾರಿಕ ಜೀವನವನ್ನು ಹಾಳು ಮಾಡುವುದು ಮಾತ್ರವಲ್ಲ ಇತರರ ಮನೆಗಳ ವಿಚಾರದಲ್ಲಿಯೂ ಮೂಗು ತೂರಿಸುತ್ತಾರೆ. ಅಂತಹ ಸಹವಾಸವು ನಿಮ್ಮ ಸಂಗಾತಿಯ ಯೋಚನಾ ಲಹರಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮನೆಯ ಶಾಂತಿಯನ್ನು ಕಸಿದುಕೊಳ್ಳುತ್ತದೆ.
ಆಡಂಬರ ಮತ್ತು ದುರಹಂಕಾರವುಳ್ಳ ಸ್ನೇಹಿತರು
ಕೆಲವು ಜನರು ತಮ್ಮ ಸಂಪತ್ತು ಮತ್ತು ಆಸ್ತಿಯನ್ನು ಎಲ್ಲರ ಮುಂದೆ ಪ್ರದರ್ಶಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ಇತರರನ್ನು ಕೆಳಗೆ ಹಾಕಿ ಮಾತನಾಡುವುದೇ ಹೆಚ್ಚು. ಇವರು ತಾವು ಎಲ್ಲರಿಗಿಂತ ಶ್ರೇಷ್ಠ ಎನ್ನುವ ಭಾವನೆ ಹೊಂದಿರುತ್ತಾರೆ. ಹಾಗಾಗಿ ಇನ್ನೊಬ್ಬರನ್ನು ನಿಕ್ರಷ್ಟವಾಗಿಯೇ ನೋಡುತ್ತಾರೆ. ತಾವು ಎಲ್ಲರಿಗಿಂತ ಭಿನ್ನ, ಶ್ರೇಷ್ಠ ಎನ್ನುವುದನ್ನು ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದರೂ ತಲುಪುತ್ತಾರೆ. ಇಂಥ ಸ್ನೇಹಿತರೊಂದಿಗೆ ನಿಮ್ಮ ಹೆಂಡತಿ ಹೆಚ್ಚಿನ ಸಮಯ ಕಳೆದರೆ, ಅನಗತ್ಯ ವಸ್ತುಗಳಿಗಾಗಿ ಬೇಡಿಕೆ ಇಡುವ ಅಭ್ಯಾಸ ರೂಢಿಸಿಕೊಳ್ಳಬಹುದು. ಈ ಅನಗತ್ಯ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ, ವಾದಗಳಾಗುವುದು, ಜಗಳವಾಗುವುದು ಸಾಮಾನ್ಯವಾಗಿ ಬಿಡುತ್ತದೆ. ಯಾವಾಗಲೂ ಕೋಪ, ಕಿರಿಕಿರಿ ಮನಸ್ಥಿತಿಯಿಂದ ಇರುವವರು ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಂಡು ಕಿರಿ ಕಿರಿ ಮಾಡಿಕೊಳ್ಳುವ ಜನರಿಂದಲೂ ದೂರವಿರಬೇಕು ಎನ್ನುತ್ತಾರೆ ಚಾಣಾಕ್ಯ. ಇಂಥಹ ಗುಣ ಇರುವ ಜನರನ್ನು ಸಮಾಜದಲ್ಲಿ ಅಥವಾ ಮನೆಯಲ್ಲಿ ಹೆಚ್ಚು ಗೌರವಿಸಲಾಗುವುದಿಲ್ಲ. ಅಂತಹ ಸ್ನೇಹಿತರೊಂದಿಗೆ ನಿರಂತರವಾಗಿ ಸಮಯ ಕಳೆಯುವುದರಿಂದ ನಿಮ್ಮ ಹೆಂಡತಿಯ ಮನಸ್ಥಿತಿ ಹಾಳಾಗಬಹುದು. ಇದು ನಿಮ್ಮ ಮನೆಯ ವಾತಾವರಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಅಸೂಯೆ ತುಂಬಿರುವವರು, ಸದಾ ಉಲ್ಟಾ ಮಾತನಾಡುವ ಸ್ನೇಹಿತರು
ಹೊರಗೆ ಬೆಣ್ಣೆಯ ರೀತಿ ಮಾತನಾಡಿಕೊಂಡು ಒಳಗೊಳಗೆ ನಿಮ್ಮ ಸುಖ ಸಂತೋಷದ ಬಗ್ಗೆ ಅಸೂಯೆ ಪಡುವ ಸ್ನೇಹಿತರು ಅತ್ಯಂತ ಅಪಾಯಕಾರಿಯಾಗಿರುತ್ತಾರೆ. ಅಂತಹ ಜನರು ಚಾಡಿ ಹೇಳುವುದರಲ್ಲಿ ಮತ್ತು ಕುತಂತ್ರ ಮಾಡುವುದರಲ್ಲಿ ನಿಪುಣರು. ನಿಮ್ಮ ಹೆಂಡತಿ ಅಂತಹ ಜನರಿಗೆ ತುಂಬಾ ಹತ್ತಿರವಾಗಿದ್ದರೆ, ನಿಮ್ಮ ಕುಟುಂಬದ ರಹಸ್ಯಗಳು ಹೊರ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅವರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟು ಮಾಡಬಹುದು. ಆದಷ್ಟು ಇಂಥವರಿಂದ ದೂರವಿರಿ, ಎಚ್ಚರಿಕೆ ವಹಿಸಿ ಎಂದು ಚಾಣಕ್ಯ ಹೇಳಿದ್ದಾರೆ.



