ಮಂಗಳೂರಿನ ಮೆಹಂದಿ ಕಲಾವಿದೆ ಶಿವಾನಿ ಪ್ರಸಾದ್ 19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್ಗಳನ್ನು ನಿರಂತರವಾಗಿ ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರಿದ್ದಾರೆ. 13 ವರ್ಷಗಳ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಕಲೆಯ ಮೇಲಿನ ಪ್ರೀತಿಯ ಫಲವಾಗಿ ಈ ಅದ್ಭುತ ಸಾಧನೆ ಸಾಧ್ಯವಾಗಿದೆ.



ಮಂಗಳೂರು,ಅ.24: ಮೆಹಂದಿ ಕಲೆಯ ಮೇಲಿನ ಅಚಲ ಪ್ರೀತಿ ಮತ್ತು 13 ವರ್ಷಗಳ ಕಠಿಣ ಪರಿಶ್ರಮವನ್ನು ಬಂಡವಾಳವಾಗಿಸಿಕೊಂಡು, ಮಂಗಳೂರು ಮೂಲದ ಪ್ರತಿಭಾವಂತ ಮೆಹಂದಿ ಕಲಾವಿದೆ ಶಿವಾನಿ ಪ್ರಸಾದ್ ಅವರು ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಕೇವಲ 19 ಗಂಟೆ 29 ನಿಮಿಷಗಳಲ್ಲಿ ಬರೋಬ್ಬರಿ 2,000 ಮೆಹಂದಿ ಕೋನ್ಗಳನ್ನು ನಿರಂತರವಾಗಿ ತಯಾರಿಸುವ ಮೂಲಕ ಅವರು ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ (Indian Book of Records) ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಅವರ ಈ ಅಪರೂಪದ ಸಾಧನೆಗೆ ಕರಾವಳಿ ಭಾಗ ಸೇರಿದಂತೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮೆಹಂದಿ ಕಲೆಯೊಂದಿಗೆ ಸುಮಾರು 13 ವರ್ಷಗಳ ಅವಿನಾಭಾವ ಸಂಬಂಧ ಹೊಂದಿರುವ ಶಿವಾನಿ ಪ್ರಸಾದ್, ಈ ದಾಖಲೆಯನ್ನು ಕೇವಲ ಒಂದು ಸಂಖ್ಯೆಯಾಗಿ ನೋಡದೆ, ತಮ್ಮ ಕಲೆಗೆ ಸಿಕ್ಕ ಮನ್ನಣೆ ಎಂದು ಬಣ್ಣಿಸಿದ್ದಾರೆ. ಆರಂಭದಲ್ಲಿ ಕೇವಲ ಒಂದು ಕನಸಾಗಿದ್ದ ಈ ಪ್ರಯತ್ನವು, ನಂತರದ ಹಂತದಲ್ಲಿ ತಮ್ಮ ಸ್ವಂತ ತಾಳ್ಮೆ, ಸಮರ್ಪಣಾ ಮನೋಭಾವ, ಶಿಸ್ತು ಹಾಗೂ ಕಲೆಯ ಮೇಲಿನ ನೈಜ ಒಲವಿಗೆ ಒಡ್ಡಿದ ದೊಡ್ಡ ಅಗ್ನಿಪರೀಕ್ಷೆಯಾಗಿತ್ತು ಎಂದು ಅವರು ಹಂಚಿಕೊಂಡಿದ್ದಾರೆ. ಇನ್ನು ಶಿವಾನಿ ಅವರ ಕುಡ್ಲ ಮೆಹಂದಿ ಆರ್ಟಿಸ್ಟ್ ಎಂಬ ಇನ್ಸ್ಟಾಗ್ರಾಮ್ ಖಾತೆ ಕೂಡ ಇದೆ. ಇದರಲ್ಲಿ ತಮ್ಮ ಕೆಲಸ ಬಗ್ಗೆ ಹಂಚಿಕೊಂಡಿದ್ದಾರೆ.
ಸುದೀರ್ಘ 19 ಗಂಟೆಗಳಿಗೂ ಅಧಿಕ ಕಾಲ ಎಳೆದು ನಿಲ್ಲಿಸಿದ ಈ ಸವಾಲಿನ ಹಾದಿಯಲ್ಲಿ ಪ್ರತಿಯೊಂದು ಕೋನ್ ಕೂಡ ಅವರ ಪರಿಶ್ರಮ ಹಾಗೂ ಕಲೆಯ ಮೇಲಿನ ಅಪಾರ ಪ್ರೀತಿಯನ್ನು ಸಾರುತ್ತದೆ. ಈ ಸಾಧನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಶಿವಾನಿ ಪ್ರಸಾದ್, “ಈ ಸಾಧನೆಯು ಕೇವಲ ಒಂದು ದಾಖಲೆಯಲ್ಲ, ಬದಲಿಗೆ ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದು ಎಂದಿಗೂ ಬಿಟ್ಟುಕೊಡದೆ ಮುನ್ನಡೆದರೆ ನಿಮ್ಮ ಉತ್ಸಾಹವೇ ಇತಿಹಾಸ ಸೃಷ್ಟಿಸಬಲ್ಲುದು ಎಂಬುದಕ್ಕೆ ಸಿಕ್ಕ ನೆನಪಿನ ದೊಡ್ಡ ಉಡುಗೊರೆ” ಎಂದು ತಿಳಿಸಿದ್ದಾರೆ. ಜೊತೆಗೆ ಈ ಇಡೀ ಪ್ರಯಾಣದುದ್ದಕ್ಕೂ ಬೆನ್ನೆಲುಬಾಗಿ ನಿಂತ ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಹಿತೈಷಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
