ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಲು ರೀಲ್ಸ್ ಮಾಡುವುದು ಬಹುತೇಕರ ದಿನನಿತ್ಯದ ಚಟವಾಗಿ ಬದಲಾಗಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಒಂದೆರಡು ನಿಮಿಷಗಳ ವೀಡಿಯೊ ಹಂಚಿಕೊಂಡು ಲೈಕ್ಸ್ ಗಿಟ್ಟಿಸಿಕೊಳ್ಳುವ ರೀಲ್ಸ್ ಹುಚ್ಚು ಎಷ್ಟರಮಟ್ಟಿಗೆ ಮಿತಿಮೀರಿದೆ ಎಂದರೆ, ಕೆಲವರು ತಮ್ಮ ಸ್ವಂತ ಮಕ್ಕಳ ಪ್ರಾಣವನ್ನ ಪಣಕ್ಕಿಡಲು ಸಹ ಹಿಂದೇಟು ಹಾಕುತ್ತಿಲ್ಲ. ಇದೀಗ ವೈರಲ್ ಆಗಿರುವ ವೀಡಿಯೊವೊಂದು ಇಂತಹದ್ದೇ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ.



ಸಮುದ್ರ ತೀರದಲ್ಲಿ ವಿಹರಿಸಲು ಹೋಗಿದ್ದ ಪೋಷಕರು ವೀಡಿಯೊ ಶೂಟ್ ಮಾಡುವುದರಲ್ಲಿ ಎಷ್ಟರಮಟ್ಟಿಗೆ ತಲ್ಲೀನರಾಗಿದ್ದರು ಎಂದರೆ, ಪಕ್ಕದಲ್ಲೇ ಸಮುದ್ರದ ಅಲೆಗೆ ಸಿಲುಕಿ ಒದ್ದಾಡುತ್ತಿದ್ದ ತಮ್ಮ ಕಂದಮ್ಮನ ಕಡೆಗೆ ಒಮ್ಮೆ ತಿರುಗಿಯೂ ನೋಡಲಿಲ್ಲ. ಸದ್ಯ ಈ ಅಮಾನವೀಯ ವರ್ತನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಸಮುದ್ರ ತೀರದಲ್ಲಿ ಪೋಷಕರ ನಿರ್ಲಕ್ಷ್ಯ
ಎಕ್ಸ್ ಖಾತೆಯಲ್ಲಿ ಮರಿಯಂ ಎಂಬುವವರು ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಪೋಷಕರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸಮುದ್ರ ತೀರಕ್ಕೆ ಬಂದಿದ್ದ ದಂಪತಿಯು ಸೆಲ್ಫಿ ಸ್ಟಿಕ್ ಹಿಡಿದುಕೊಂಡು ವೀಡಿಯೊ ಮಾಡುತ್ತಾ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಮಹಿಳೆಯು ತನ್ನ ಎಡಗೈಯಲ್ಲಿ ಮಗುವಿನ ಕೈಯನ್ನು ಅತ್ಯಂತ ಸಡಿಲವಾಗಿ ಹಿಡಿದುಕೊಂಡಿದ್ದಳು. ಕ್ಯಾಮೆರಾಗೆ ಪೋಸ್ ನೀಡುವ ಭರದಲ್ಲಿ ಆಕೆಯ ಕೈಯಿಂದ ಕಂದಮ್ಮನ ಕೈ ಜಾರಿ ಮಗು ಮರಳಿನ ಮೇಲೆ ಬಿದ್ದಿದೆ. ಮಗು ಕೆಳಗೆ ಬಿದ್ದರೂ ಆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ತಾಯಿ, ಕೇವಲ ಒಂದು ಕ್ಷಣ ಹಿಂದಿರುಗಿ ನೋಡಿ, ಮಗುವನ್ನ ಮೇಲಕ್ಕೆತ್ತುವ ಬದಲು ಮತ್ತೆ ಕ್ಯಾಮೆರಾಗೆ ಪೋಸ್ ನೀಡಲು ಮುಂದಾಗಿದ್ದಾಳೆ. ಪತಿ ಕೂಡ ಸೆಲ್ಫಿ ಸ್ಟಿಕ್ ಹಿಡಿದು ಚಿತ್ರೀಕರಣವನ್ನು ಮುಂದುವರಿಸಿದ್ದಾನೆ. ಈ ನಡುವೆ ಮರಳಿನ ಮೇಲೆ ಬಿದ್ದಿದ್ದ ಪುಟ್ಟ ಮಗು, ದಡಕ್ಕೆ ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಒದ್ದಾಡಲಾರಂಭಿಸಿದೆ.
ಕಂದಮ್ಮನ ರಕ್ಷಣೆಗೆ ಧಾವಿಸಿದ ಅಪರಿಚಿತ
ಪೋಷಕರು ವೀಡಿಯೊ ಮಾಡುವುದರಲ್ಲಿ ಮೈಮರೆತರೆ, ಸಮುದ್ರದ ಅಲೆಗಳು ಮಗುವನ್ನ ಆವರಿಸಿಕೊಳ್ಳತೊಡಗಿದವು. ಇದನ್ನು ಗಮನಿಸಿದ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬರು ತಕ್ಷಣವೇ ಓಡಿಬಂದು, ಅಲೆಗಳಿಗೆ ಸಿಲುಕಿದ್ದ ಮಗುವಿನ ಕೈಹಿಡಿದು ಮೇಲಕ್ಕೆತ್ತಿದ್ದಾರೆ. ಮಗುವನ್ನ ಎತ್ತಿಕೊಂಡು ಹೋಗಿ ಪೋಷಕರ ಬಳಿ ಬಿಟ್ಟ ಆ ವ್ಯಕ್ತಿ, ಮಗು ಅಪಾಯಕ್ಕೆ ಸಿಲುಕಿದ್ದರ ಬಗ್ಗೆ ಎಚ್ಚರಿಸಿದ್ದಾರೆ. ಆಗಲಷ್ಟೇ ಎಚ್ಚೆತ್ತ ಪೋಷಕರು ಕ್ಯಾಮೆರಾದಿಂದ ದೃಷ್ಟಿ ಸರಿಸಿ ಮಗುವಿನತ್ತ ನೋಡಿದ್ದಾರೆ. ಒಂದು ವೇಳೆ ಆ ಅಪರಿಚಿತ ವ್ಯಕ್ತಿ ಸರಿಯಾದ ಸಮಯಕ್ಕೆ ಅಲ್ಲಿಗೆ ಧಾವಿಸದಿದ್ದರೆ, ಮಗು ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು.
