ಮೂಡುಬಿದಿರೆ: ಗ್ರಾಮೀಣ ಯುವಜನರಿಗೆ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2007ರಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ. ಇಂದು ದೇಶದ ಪ್ರಮುಖ ಬೃಹತ್ ಉದ್ಯೋಗ ಮೇಳಗಳಲ್ಲಿ ಒಂದಾಗಿ ಬೆಳೆದಿದ್ದು, ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯ ಭಾಗವಾಗಿ ಆಯೋಜಿಸಲಾಗುವ ಈ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳು ಹಾಗೂ ಭಾಗವಹಿಸುವ ಕಂಪನಿಗಳಿಗೆ ಸಂಪೂರ್ಣ ಉಚಿತವಾಗಿರಲಿದೆ. ಇದುವರೆಗೆ ಪ್ರತಿಷ್ಠಾನವು 22 ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದು. ಪ್ರತಿ ಆವೃತ್ತಿಯಲ್ಲಿ ಸರಾಸರಿ 250ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ. ಒಟ್ಟು 66.432 ಅಭ್ಯರ್ಥಿಗಳು ಶಾರ್ಟ್ಲಿಸ್ಟ್ ಆಗಿದ್ದು, 40,848 ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗದ ಆಫರ್ ಪಡೆದಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳ ಕಂಪನಿಗಳ ಭಾಗವಹಿಸುವಿಕೆ ಈ ಬಾರಿಯ ಮೇಳದಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬ್ಯಾಂಕಿಂಗ್ ಮತ್ತು ಹಣಕಾಸು, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧೋದ್ಯಮ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ದೂರಸಂಪರ್ಕ, ಆರೋಗ್ಯ, ಮಾಧ್ಯಮ, ನಿರ್ಮಾಣ, ಎಲೆಕ್ಟ್ರಾನಿಕ್ಸ್. ಶಿಕ್ಷಣ ಹಾಗೂ ಎನ್ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆ ನಡೆಸಲಿವೆ. ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ, ನಿರ್ವಹಣೆ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಕೌಶಲ್ಯಾಧಾರಿತ ವೃತ್ತಿಗಳು, ಪಿಯುಸಿ, ಎಸ್ಎಸ್ಎಲ್ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಆನ್ಲೈನ್ ನೋಂದಣಿ ಕಡ್ಡಾಯ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಆನ್ಲೈನ್ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಭಾಗವಹಿಸುವ ಕಂಪನಿಗಳ ವಿವರಗಳನ್ನು ವೆಬ್ಸೈಟ್ನಲ್ಲಿ ನಿರಂತರವಾಗಿ ನವೀಕರಿಸಲಾಗುತ್ತಿದ್ದು, ಅಭ್ಯರ್ಥಿಗಳು ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಸುಗಮ ಹಾಗೂ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಸುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು, ವಿವಿಧ ಹುದ್ದೆಗಳ ವಿವರಗಳು ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಮಾಹಿತಿ ನೀಡಲು ಆಳ್ವಾಸ್ನ ತಜ್ಞರ ತಂಡವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ವಿಶೇಷ ಓರಿಯಂಟೇಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಲಾಯಿತು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಐಟಿಐ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆಯೂ ಇರಲಿದೆ. ಎಲ್ಲಾ ಅಭ್ಯರ್ಥಿಗಳು ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಹಾಜರಿರಬೇಕು. ಅಭ್ಯರ್ಥಿಗಳು 5ರಿಂದ 10 ಪಾಸ್ಪೋರ್ಟ್ ಗಾತ್ರದ ಭಾವಚಿತ್ರಗಳು, ನವೀಕರಿಸಿದ ಬಯೋಡೇಟಾ ಅಥವಾ ರೆಡ್ಯೂಮ್, ಎಲ್ಲಾ ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು ಹಾಗೂ ಆನ್ಲೈನ್ ನೋಂದಣಿ ಸಂಖ್ಯೆ ಅಥವಾ ಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕು ಎಂದು ಮಾಹಿತಿ ನೀಡಿದರು.
ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ಪ್ರಮುಖರಾದ ರಂಜಿತಾ ಆಚಾರ್ಯ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.



