ಬೆಂಗಳೂರು, ನ. 2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೆಸರು ಕೇಳಿಬಂದಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದರ ನಡುವೆ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದ ವ್ಯಕ್ತಿಗೆ ಜಾಮೀನು ಸಿಕ್ಕಿದೆ. ಹೌದು..ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಕೃಪಾ ಆಳ್ವಾ, ವಿನೋದ್ ಕುಮಾರ್ ಹಾಗೂ ಪ್ರಶಾಂತ್ ಕುಮಾರ್ ಗೂ ಬೆಂಗಳೂರಿನ 66ನೇ ಸಿಸಿಹೆಚ್ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.


ಸ್ಟಿಂಗ್ ಆಪರೇಷನ್ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯನವರು ದೂರು ನೀಡಿದ್ದು, ಈ ದೂರಿನ ಅನ್ವಯ ಸಿಸಿಬಿ ಪೊಲೀಸರು, ಕೃಪಾ ಆಳ್ವಾ, ವಿನೋದ್ ಕುಮಾರ್ ಹಾಗೂ ಪ್ರಶಾಂತ್ ಕುಮಾರ್ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಿ ಕೆಲ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆದ್ರೆ, ಬಂಧನದ ಭೀತಿ ಹಿನ್ನೆಲೆಯಲ್ಲಿ ಈ ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ಸಮ್ಮತಿಸಿದ್ದು,ಪೊಲೀಸರ ತನಿಖೆಗೆ ಸಹಕರಿಸಬೇಕು ಹಾಗೇ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಕೃಪಾ ಆಳ್ವಾ ವಿದೇಶಕ್ಕೆ ಪರಾರಿ, ಪಕ್ಷದಿಂದ ಉಚ್ಛಾಟನೆ
ಸ್ಟಿಂಗ್ ಆಪರೇಷನ್ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯನವರ ಬಹಿರಂಗವಾಗಿಯೇ ಕೃಪಾ ಆಳ್ವಾರ ಹೆಸರು ಹೇಳಿದ್ದರು. ಇದರ ಬೆನ್ನಲ್ಲೇ ಕೃಪಾ ಖುದ್ದಾಗಿ ಸಿಸಿಬಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಬಳಿಕ ಅವರು ಏಕಾಏಕಿ ವಿದೇಶಕ್ಕೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಕಾಂಗ್ರೆಸ್, ಕೃಪಾ ಆಳ್ವಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಇನ್ನು ವಿನೋದ್ ಹಾಗೂ ಪ್ರಶಾಂತ್ ಎನ್ನುವರನ್ನು ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿ ಕಲೆಹಾಕಿದ್ದರು. ಆದ್ರೆ, ಇವರಿಗೂ ಬಂಧನದ ಭೀತಿ ಕಾಡುತ್ತಿದ್ದರಿಂದ ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮೂವರಿಗೂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
