ಮಂಗಳೂರು: ಕೇಂದ್ರ ಸರ್ಕಾರವು ದಕ್ಷಿಣ ಕನ್ನಡವನ್ನು ರಫ್ತು ಕೇಂದ್ರವೆಂದು ಘೋಷಿಸಿದೆ, ಸಮುದ್ರಾಹಾರ ಮತ್ತು ಗೋಡಂಬಿಯನ್ನು ಅಧಿಕವಾಗಿ ಉತ್ಪಾದಿಸುವುದರಿಂದ ರಪ್ತುಕೇಂದ್ರ ಎಂದು ಘೋಷಿಸಲಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಜಿಲ್ಲಾವಾರು ರಫ್ತು ಕೇಂದ್ರಗಳಾಗಿ ಉಪಕ್ರಮದ ಅಡಿಯಲ್ಲಿ, ದಕ್ಷಿಣ ಕನ್ನಡವನ್ನು ಅಧಿಕೃತವಾಗಿ ರಫ್ತು ತಾಣವೆಂದು ಗುರುತಿಸಲಾಗಿದೆ. ಈ ಮಾನ್ಯತೆಯು ಸುಸ್ಥಿರ ಆರ್ಥಿಕ ಅಭಿವೃದ್ಧಿಯತ್ತ ಜಿಲ್ಲೆಯ ನಿರಂತರ ಪ್ರಯತ್ನಗಳತ್ತ ಗಮನ ಸೆಳೆದಿದೆ. ಡಿಸೆಂಬರ್ ೨ ರಂದು ಸಂಸತ್ತಿನಲ್ಲಿ ಚೌಟ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಉತ್ತರ ನೀಡಿದೆ.
ದಕ್ಷಿಣ ಕನ್ನಡವನ್ನು ರಫ್ತು ಕೇಂದ್ರವಾಗಿ ಘೋಷಿಸುವುದರಿಂದ ಸ್ಥಳೀಯ ಕೈಗಾರಿಕೆಗಳನ್ನು ಬಲಪಡಿಸಲು, ಮೌಲ್ಯವರ್ಧಿತ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಜಿಲ್ಲೆಯ ಸಂಪರ್ಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ಜಿತಿನ್ ಪ್ರಸಾದ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ರಫ್ತು ಕ್ರಿಯಾ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ, ಜಿಲ್ಲೆ ನವಮಂಗಳೂರು ಬಂದರಿನೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ ಮತ್ತು ಜಿಲ್ಲಾ ರಫ್ತು ಉತ್ತೇಜನ ಸಮಿತಿಯನ್ನು ಸಹ ರಚಿಸಲಾಗಿದೆ ಎಂದು ಸಚಿವರು ಮಾಹಿತಿ ಡಿದರು.









