ಸಂಪ್ರದಾಯದ ಉಳಿವಿಗೆ ಸಂಕಲ್ಪ; ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಘಟನೆಗಳ ಜವಾಬ್ದಾರಿ ಶ್ಲಾಘನೀಯ: ಲ. ಅನಿಲ್ದಾಸ್


ಮಂಗಳೂರು: ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಮೌಲ್ಯಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲಘಟ್ಟಕ್ಕೆ ಆಟಿ ತಿಂಗಳ ಮಹತ್ವವನ್ನು ಪರಿಚಯಿಸುವುದು ಅತ್ಯಂತ ಅನಿವಾರ್ಯವಾಗಿದೆ. ವಿಶೇಷವಾಗಿ, ತುಳುನಾಡಿನ ಸಂಸ್ಕೃತಿಯಲ್ಲಿ ಆಟಿ ತಿಂಗಳನ್ನು ಅತ್ಯಂತ ಕಷ್ಟದ ಮತ್ತು ಸಂಕಷ್ಟದ ಕಾಲಘಟ್ಟವೆಂದು ಪರಿಗಣಿಸಲಾಗುತ್ತಿತ್ತು. ಹೊಟ್ಟೆಪಾಡಿಗೆ ಅನ್ನವಿಲ್ಲದೆ, ಪ್ರಕೃತಿಯ ಮುಂಗಾರಿನ ತೀವ್ರತೆಯನ್ನು ಎದುರಿಸುತ್ತಾ ನಮ್ಮ ಹಿರಿಯರು ಪಟ್ಟ ಕಷ್ಟಗಳು ಹಾಗೂ ಆ ಸಂದರ್ಭದಲ್ಲೂ ಅವರು ಪಾಲಿಸಿಕೊಂಡು ಬಂದ ಆಚಾರ-ವಿಚಾರಗಳು ಇಂದಿನ ಯುವ ಪೀಳಿಗೆಗೆ ಖಂಡಿತಾ ತಿಳಿದಿರಲೇಬೇಕು. ಇತಿಹಾಸದ ಆ ಕಠಿಣ ದಿನಗಳನ್ನು ಮತ್ತು ನಮ್ಮ ಶ್ರೀಮಂತ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಇಂದಿನ ಸಮಾಜದ ಮೇಲಿದೆ ಎಂದು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಲಯನ್ ಅನಿಲ್ದಾಸ್ ಹೇಳಿದರು.
ಅವರು ಕುಲಾಲ ಸಂಘ ಕುಳಾಯಿ, ಕುಲಾಲ ಮಹಿಳಾ ಮಂಡಲ ಮತ್ತು ಕುಲಾಲ ರಜತ ಸೇವಾ ಟ್ರಸ್ಟ್, ವತಿಯಿಂದ ಕುಳಾಯಿ ಶ್ರೀ ವೆಂಕಟರಮಣ ಶಾಲೆಯಲ್ಲಿ ಆಯೋಜಿಸಿದ ಇತ್ತೆದ ಆಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜನಾರ್ಧನ್ ಸಾಲಿಯಾನ್ ಅವರು ಮಾತನಾಡಿ, ಈಗಿನ ಕಾಲದ ಆಟಿ ತಿಂಗಳಲ್ಲಿ ಜನರ ಬದುಕು ಮತ್ತು ಹಿಂದಿನ ಆಟಿ ತಿಂಗಳಲ್ಲಿ ನಮ್ಮ ಪೂರ್ವಿಕರ ಬದುಕಿನ ಬಗ್ಗೆ ತಿಳಿಯಪಡಿಸಿದರು.
ಮುಖ್ಯ ಅತಿಥಿಗಳಾಗಿ ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಬಾಬುಚಂದ್ರ, ಸುರತ್ಕಲ್, ವೆಟ್ರಿವಲ್ ಸಿರಾಮಿಕ್ಸ್ ಅಡ್ಯಾರ್ ಮಾಲಕಿ ಪ್ರಿಯ ಸತೀಶ್ ಕುಲಾಲ್ ತುಂಬೆ ಶುಭ ಹಾರೈಸಿದರು.

ಸನ್ಮಾನ
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಾಧ್ಯಕ್ಷ ಸುಧಾಕರ್ ಸಾಲಿಯಾನ್, ಮ್ಯಾರಥಾನ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ಗಣೇಶ್ ಎಂ. ರಾಜ್ಯ ಮಟ್ಟದ ಹಿರಿಯ ವಾಲಿಬಾಲ್ ಆಟಗಾರರ ಸುರೇಶ್ ಚೆಳ್ಳಾರ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಗಂಗಾಧರ್ ಬಂಜನ್ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆ ಗೈದು ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ಮೋಹನ್ ಐ ಮೂಲ್ಯ , ಗೌರವ ಅಧ್ಯಕ್ಷ ಗಂಗಾಧರ್ ಕೆ., ಕಾರ್ಯದರ್ಶಿ ಗಣೇಶ್ ಕುಲಾಲ್, ಕೋಶಾಧಿಕಾರಿ ಹರೀಶ್ ಕುಲಾಲ್, ಕುಮಾರ್ ಕುಲಾಲ್, ಕೆ ಏನ್ ಉಮೇಶ್ ಕುಲಾಲ್ , ಗಣೇಶ್ ರಜತ , ರಮೇಶ್ ಆರ್ ಕೆ,, ದೇವದಾಸ್ ಟೈಲರ್, ಗಣೇಶ್ ಅಂಚನ್, ಮೋಹನ್ ಕಾವಿನಕಲ್ಲು ,ಯೋಗೀಶ್ ಡಿ, ಮಾಧವ ಕುಲಾಲ್, ನಾರಾಯಣ್ ಮೂಲ್ಯ ,ಹರ್ಷಿತ್ ಕುಲಾಲ್ ,ಮಹಿಳಾ ಮಂಡಲದ ಅಧ್ಯಕ್ಷೆ , ಶಕುಂತಲಾ ಬರ್ಕೆ, ಅಮಿತಾ ಯಶವಂತ್ , ಲೋಲಾಕ್ಷಿ ಹರೀಶ್ ,ಮೀರಾ ಮೋಹನ್, ಭಾರತಿ ಗಂಗಾಧರ್, ಪ್ರಫುಲಾ ಸುಧಾಕರ್,ಮುಂತಾದವರು ಉಪಸ್ಥಿತರಿದ್ದರು.
ಆಟಿ ತಿಂಗಳ ವಿವಿಧ ಖಾದ್ಯ ತಿನಸುಗಳನ್ನು, ಊಟವನ್ನು ಉಣ್ಣ ಬಡಿಸಲಾಯಿತು. ದಿನೇಶ್ ಕುಲಾಲ್ ಕುಲಾಲ್ ವಂದಿಸಿದರು. ಬಾನುಪ್ರಿಯಾ ಮತ್ತು ಅನುಶ್ರೀ ಹರ್ಷಿತ್ ನಿರೂಪಿಸಿದರು.



