ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ತೃತೀಯ; ನಗದು ಪುರಸ್ಕಾರ
ವೇಣೂರು: ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಧನುಶ್ರೀ ಎಸ್. ಕುಲಾಲ್ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದಾಳೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಇವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನವ ಭಾರತದ ನಿರ್ಮಾಣದಲ್ಲಿ ಜವಾಹರಲಾಲ್ ನೆಹರು ರವರ ಕೊಡುಗೆ ವಿಷಯದ ಕುರಿತು ನಡೆದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಧನುಶ್ರೀ ಎಸ್. ಕುಲಾಲ್ ತೃತೀಯ ಸ್ಥಾನವನ್ನು ಗಳಿಸಿ 7,500 ರೂಪಾಯಿ ನಗದು ಪುರಸ್ಕಾರವನ್ನು ಪಡೆದುಕೊಂಡಿರುತ್ತಾಳೆ.
ಇತ್ತೀಚೆಗಷ್ಟೇ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಇದರ ಸಹಯೋಗದಲ್ಲಿ ಗದಗದಲ್ಲಿ ಜರುಗಿದ ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ನಾಲ್ಕು ವಿಭಾಗಗಳಿಂದ ಸ್ಪರ್ಧಿಸಿದ ೧೦೬ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಳು. ಇದೀಗ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿ ಮಿಂಚಿದ್ದಾಳೆ.









