ಶಿಕ್ಷಣಕ್ಕೆ ಪ್ರೋತ್ಸಾಹ ಮಕ್ಕಳ ಭವಿಷ್ಯ ರೂಪಿಸಿದಂತೆ: ಋತಿಕಾಶೋಬಿತ್
ಬೆಳ್ತಂಗಡಿ: ಬದಲಾದ ಕಾಲಘಟ್ಟದಲ್ಲಿ ಅದಕ್ಕೆ ಪೂರಕವಾಗಿ ಶಿಕ್ಷಣದ ಅಗತ್ಯವಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಸರಕಾರಿ ಶಾಲಾ ಮಕ್ಕಳಿಗೆ ಭವಿಷ್ಯ ರೂಪಿಸುವ ಶಿಕ್ಷಣದ ಅಗತ್ಯವಿದ್ದು ಇದು ಬಳಂಜ ಶಿಕ್ಷಣ ಟ್ರಸ್ಟ್ ನ ಕಲ್ಪನೆಯಲ್ಲಿ ಸಿಗುತ್ತಿರುವುದು ಹೆಮ್ಮೆಯ ವಿಷಯ. ಮಕ್ಕಳ ಶಿಕ್ಷಣಕ್ಕೆ, ಶಾಲೆಗಳ ಅಭಿವೃದ್ದಿಗೆ ನೆರವು ನೀಡುವುದು ಮಕ್ಕಳ ಭವಿಷ್ಯ ರೂಪಿಸಿದಂತೆ ಎಂದು ಡಬ್ಲಿನ್ ದೇಶದ ಪ್ರಜೆ ಋತಿಕಾಶೋಬಿತ್ ಅಭಿಪ್ರಾಯ ಪಟ್ಟರು.
ಅವರು ಜೂ ೧ ರಂದು ಬಳಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢಶಾಲಾ ಆರಂಬೋತ್ಸವ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಮತ್ತು ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಲಕ್ಷ್ಮೀ ಗ್ರೂಪ್ ಮಾಲಕರು ನೀಡಿದ ಎಲ್ಕೆಜಿ, ಯುಕೆಜಿ ಮಕ್ಕಳ ಪಠ್ಯ ಪುಸ್ತಕ ನೀಡಿ ಮಾತನಾಡಿದರು. ಬಳಂಜ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ, ಅಳದಂಗಡಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದ್ಯಮಿ ರಾಕೇಶ್ ಹೆಗ್ಡೆ ಮಾತನಾಡಿ, ಊರಿನ ಶಾಲೆ ಬೆಳಗಿಸುವ ಜೊತೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ನಿಜವಾದ ಸೇವೆ. ಇಂದು ಬಳಂಜ ಶಿಕ್ಷಣ ಟ್ರಸ್ಟ್ ಮೂಲಕ ಅನೇಕ ಅಬಿವೃದ್ದಿ ಕಾರ್ಯದ ಜೊತೆ ಶಿಕ್ಷಣದ ಗುಣಮಟ್ಟ ಹೆಚ್ಚಿದೆ ಎಂದರು.
ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ, ಪತ್ರಕರ್ತ ಮನೋಹರ್ ಬಳಂಜ ಮಾತನಾಡಿ, ಊರಿನ ಶಾಲೆ ಬೆಳಗಿದರೆ ಇಡಿ ಊರೇ ಬೆಳಗಿದಂತೆ. ಇಂದು ಮಕ್ಕಳ ಶಿಕ್ಷಣ, ಶಾಲಾ ಮೂಲಭೂತ ಸೌಕರ್ಯಗಳ ಬಗ್ಗೆ ಬಳಂಜ ಶಿಕ್ಷಣ ಟ್ರಸ್ಟ್ ಅನೇಕ ಕನಸುಗಳನ್ನು ಕಂಡು ದಾನಿಗಳ ಮೂಲಕ ಕನಸನ್ನು ನನಸು ಮಾಡುತ್ತಿದೆ. ಮಕ್ಕಳಿಗೆ ಆಂಗ್ಲ ಮಾದ್ಯಮ ಜೊತೆ ಕನ್ನಡ ಮಾದ್ಯಮ ಶಿಕ್ಷಣ, ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದು ಇದರಿಂದ ಮಕ್ಕಳಲ್ಲಿ ಬೆಳವಣಿಗೆ ಕಾಣುತ್ತಿದ್ದೇವೆ. ಒಂದು ದಾಖಲಾತಿ ಆಗುತ್ತಿದ್ದ ಬಳಂಜ ಶಾಲೆ ಈಗ ೯೦ ಕ್ಕೂ ಅಧಿಕ ದಾಖಲಾತಿ ಆಗುತ್ತಿರುವುದು ನಮಗೆ ಹೆಮ್ಮೆಯಾಗುತ್ತಿದೆ. ಈ ವರ್ಷದಿಂದ ನಾಲ್ಕನೇ ತರಗತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ನೀಡಲಾಗುವುದು. ಮಕ್ಕಳಿಗೆ ಅನುಕೂಲಕ್ಕೆ ಅಶ್ವಥ್ ಹೆಗ್ಡೆ ಪೌಂಡೇಶನ್ ಮೂಲಕ ವಾಹನ ವ್ಯವಸ್ಥೆ, ಉದ್ಯಮಿ ಲಿಂಬಯ ದೇವಾಡಿಗರ ಕೊಡುಗೆಯಿಂದ ಚಿಣ್ಣರ ಅಂಗಣ ರ್ಮಾಣ ಆಗಿದೆ. ಮುಂದೆ ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಿದ್ದೇವೆ ಎಂದರು.
ಬಳಂಜ ಶಿಕ್ಷಣ ಟ್ರಸ್ಟ್ನ ಟ್ರಸ್ಟಿ ಪ್ರೌಢಶಾಲಾ ಶಾಲಾಭಿವೃದ್ದಿ ಸಮಿತಿ ಗೌರವ ಸದಸ್ಯ ಸಂತೋಷ್ ಕುಮಾರ್ ಕಾಪಿನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆ ಮುಚ್ಚುವ ಹಂತದ ಅಪಾಯ ಬಂದಾಗ ಬಳಂಜ ಶಿಕ್ಷಣ ಟ್ರಸ್ಟ್ ನಮ್ಮ ಶಾಲೆ ಬೆಳೆಗಬೇಕು ಎಂದು ಅನೇಕ ಪ್ರಯೋಗಗಳನ್ನು ಮಾಡಿ ಇಂದು ಯಶಸ್ಸು ಕಂಡಿತು. ಮಕ್ಕಳ ಹಾಜರಾತಿ ಕಂಡಾಗ ಹೆಮ್ಮೆಯಾಗುತ್ತಿದೆ ಎಂದರು. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ೧೦೦% ಪಲಿತಾಂಶ ಬಂದಿದ್ದು ಇದರಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುಲೋಚನ ಮತ್ತು ಶಿಕ್ಷಕರು ನಗದು ಪುರಸ್ಕಾರ ನೀಡಿ ಗೌರವಿಸಿದರು.
ಪಟ್ಲ ಫೌಂಡೇಶನ್ ನಿಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ರತ್ನಾಕರ್ ಪೂಜಾರಿ, ಬಳಂಜ ಶಿಕ್ಷಣ ಟ್ರಸ್ಟ್ ನ ಕಾನೂನು ಸಲಹೆಗಾರ ಸತೀಶ್ ರೈ ಬಾರ್ದಡ್ಕ, ಬಳಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ, ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ವಂದಿಸಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.





