ನಟಿ ರುಕ್ಮಿಣಿ ವಸಂತ್ ಅವರ ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಗಳ ವೈರಲ್ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರು 29 ಸಾಮಾಜಿಕ ಖಾತೆಗಳ ವಿರುದ್ಧ FIR ದಾಖಲಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್ಫೇಕ್ ತಂತ್ರಜ್ಞಾನ ಬಳಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಿದ್ದ ಕಿಡಿಗೇಡಿಗಳ ವಿರುದ್ಧ ಐಟಿ ಆ್ಯಕ್ಟ್ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಶುರುಮಾಡಲಾಗಿದೆ.
ಸ್ಯಾಂಡಲ್ವುಡ್ನ ಪ್ರಸಿದ್ಧ ನಟಿ ರುಕ್ಮಿಣಿ ವಸಂತ್ ಅವರ ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಕಿಡಿಗೇಡಿಗಳಿಗೆ ನಡುಕು ಶುರುವಾಗಿದೆ. ಈ ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್ಫೇಕ್ ತಂತ್ರಜ್ಞಾನವನ್ನು ಬಳಸಿ, ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖವನ್ನು ಜೋಡಿಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಲಾಗಿದೆ ಎಂದು ನಟಿ ದೂರು ನೀಡಿದ್ದರು. ಈ ಕೃತ್ಯದಿಂದ ತಮಗೆ ತೀವ್ರ ಮುಜುಗರವಾಗಿದ್ದು, ತಮ್ಮ ಚಾರಿತ್ರ್ಯ ಹರಣ ಮಾಡಲು ಯತ್ನಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರು ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.





