ವೇಣೂರು, ಸೆ.14: ಗಣೇಶ ಚತುರ್ಥಿ ಸಂಭ್ರಮದಲ್ಲಿದ್ದ ಕರಾವಳಿ ಜನತೆಗೆ ಸೋಮವಾರ ಸಂಜೆ ಅಪರೂಪದ ಖಗೋಳ ಕೌತುಕವೊಂದು ಬೋನಸ್ ಆಗಿ ದೊರೆತಿದೆ. ಸೂರ್ಯಾಸ್ತದ ಕೆಲವೇ ಹೊತ್ತಿನಲ್ಲಿ ಪಶ್ಚಿಮ ಆಕಾಶದಲ್ಲಿ ಪ್ರಕಾಶಮಾನವಾದ ಅರ್ಧಚಂದ್ರ ಹಾಗೂ ಶುಕ್ರ ಗ್ರಹ ಪರಸ್ಪರ ಅತ್ಯಂತ ಸಮೀಪದಲ್ಲಿದ್ದು, ಕಣ್ಣಿಗೆ ಹಬ್ಬವನ್ನು ಉಂಟುಮಾಡಿದವು.


ಸೂರ್ಯಾಸ್ತದ ಕೆಲವೇ ಹೊತ್ತಿನ ಬಳಿಕ ಪಶ್ಚಿಮ ದಿಕ್ಕಿನ ಆಕಾಶದಲ್ಲಿ ಅರ್ಧಚಂದ್ರನೊಂದಿಗೆ ಅತ್ಯಂತ ಪ್ರಕಾಶಮಾನವಾಗಿ ಶುಕ್ರ ಗ್ರಹ ಗೋಚರಿಸಿತು. ಮಧ್ಯ ಹಾಗೂ ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಚಂದ್ರನು ಕೆಲಕಾಲ ಶುಕ್ರ ಗ್ರಹದ ಮುಂದೆ ಹಾದುಹೋಗುವ ಅಪರೂಪದ ಚಂದ್ರ ಆವರಣ ಸಂಭವಿಸಿದರೆ, ಕರಾವಳಿ ಪ್ರದೇಶಗಳ ಜನರು ಚಂದ್ರ ಮತ್ತು ಶುಕ್ರನ ಅದ್ಭುತ ಸಮೀಪ ಸಂಯೋಗವನ್ನು ವೀಕ್ಷಿಸುವ ಅವಕಾಶ ಪಡೆದರು. ಈ ಖಗೋಳ ವಿದ್ಯಮಾನದ ಕುರಿತು ವಿವರಿಸಿದ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಐಐಎ), ಖಗೋಳಶಾಸ್ತ್ರದಲ್ಲಿ ಒಂದು ಆಕಾಶಕಾಯವು ಮತ್ತೊಂದು ಆಕಾಶಕಾಯದ ಮುಂದೆ ಹಾದುಹೋಗಿ, ಕೆಲಕಾಲ ಅದನ್ನು ದೃಷ್ಟಿಗೆ ಕಾಣದಂತೆ ಮಾಡುವ ವಿದ್ಯಮಾನವನ್ನು ಆವರಣ ಎಂದು ಕರೆಯಲಾಗುತ್ತದೆ. ಚಂದ್ರ ಆವರಣದ ಸಂದರ್ಭದಲ್ಲಿ, ಭೂಮಿಗೆ ತುಲನಾತ್ಮಕವಾಗಿ ಅತ್ಯಂತ ಸಮೀಪದಲ್ಲಿರುವ ಚಂದ್ರನು ಗ್ರಹಗಳು ಅಥವಾ ನಕ್ಷತ್ರಗಳಂತಹ ದೂರದ ಆಕಾಶಕಾಯಗಳ ಮುಂದೆ ಹಾದುಹೋಗುತ್ತಿರುವಂತೆ ಕಾಣುತ್ತದೆ. ಇಂತಹ ಆವರಣಗಳು ಭೂಮಿಯ ಎಲ್ಲೆಡೆಯಿಂದ ಗೋಚರಿಸುವುದಿಲ್ಲ. ನಿರ್ದಿಷ್ಟ ಪ್ರದೇಶಗಳಿಂದ ಮಾತ್ರ ಅವುಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಹಬ್ಬದ ಸಡಗರದ ನಡುವೆಯೇ ಪಶ್ಚಿಮ ದಿಕ್ಕಿನಲ್ಲಿ ಅರ್ಧಚಂದ್ರನ ಜತೆಗೆ ಪ್ರಕಾಶಮಾನವಾಗಿ ಮಿಂಚಿದ ಶುಕ್ರ ಗ್ರಹ ಜನರನ್ನು ಆಶ್ಚರ್ಯಚಕಿತಗೊಳಿಸಿತು. ಈ ಮನಮೋಹಕ ಕೌತುಕದ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.



