ಬಹುನಿರೀಕ್ಷಿತ ‘ ರಾಮಾಯಣ’ ಸಿನಿಮಾದಲ್ಲಿ ಸೀತಾ ಮಾತೆಯಾಗಿ ಅಭಿನಯಿಸುತ್ತಿರುವ ನಟಿ ಸಾಯಿ ಪಲ್ಲವಿ ಅವರ ಹೆಸರು ಈಗ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ. ಇತ್ತೀಚೆಗೆ ತಮ್ಮ ಚಿತ್ರದ ಸಹನಟರಾದ ರಣಬೀರ್ ಕಪೂರ್ ಹಾಗೂ ರವಿ ದುಬೆ ಅವರೊಂದಿಗೆ ‘ಕೌನ್ ಬನೇಹಾ ಕರೋಡ್ಪತಿ 18’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮಗಿರಬೇಕಾದ ಜೀವನಸಂಗಾತಿಯ ಗುಣಗಳು ಹಾಗೂ ರಾಮಾಯಣ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ವಿಶೇಷ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಾಯಿ ಪಲ್ಲವಿ ಬಯಸುವ ಪರ್ಫೆಕ್ಟ್ ಪತಿ ಹೇಗಿರಬೇಕು?
ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಅವರು ಜೀವನಸಂಗಾತಿಯಲ್ಲಿ ಇರಬೇಕಾದ ಗುಣಗಳ ಬಗ್ಗೆ ಕೇಳಿದಾಗ ಸಾಯಿ ಪಲ್ಲವಿ ಮನ ಬಿಚ್ಚಿ ಮಾತನಾಡಿದರು. ‘ಮೊದಲನೆಯದಾಗಿ, ಅವನು ಒಬ್ಬ ಒಳ್ಳೆಯ ಮನುಷ್ಯನಾಗಿರಬೇಕು. ಅತಿಯಾದ ಸ್ವಾರ್ಥಿ ಆಗಿರಬಾರದು. ಸ್ವಯಂ ವಿಮರ್ಶೆ ಮಾಡಿಕೊಳ್ಳುವ ವ್ಯಕ್ತಿಯಾಗಿರಬೇಕು. ತಮ್ಮ ನಡವಳಿಕೆಗಳನ್ನು ಸರಿ-ತಪ್ಪು ಎಂದು ಪರಿಶೀಲಿಸಿಕೊಳ್ಳುವ ಗುಣವಿರಬೇಕು. ಅಂದರೆ, ತಾವು ಜೀವನದಲ್ಲಿ ಎಲ್ಲಿದ್ದೇವೆ ಎಂಬ ಅರಿವು ಅಥವಾ ಒಳನೋಟ ಇರಬೇಕು’ ಎಂದರು ಅವರು.

‘ತಪ್ಪನ್ನು ಮಾಡುವುದು ಸಹಜ, ಆದರೆ ಆ ತಪ್ಪನ್ನು ತಿದ್ದುಕೊಳ್ಳುವ ಮನಸ್ಸಿರಬೇಕು. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಬಾರದು. ನನ್ನದೇನೂ ದೊಡ್ಡ ಪಟ್ಟಿಯಿಲ್ಲ, ಆದರೆ ಅವರು ಉತ್ತಮ ವ್ಯಕ್ತಿಯಾಗಿರಬೇಕು ಮತ್ತು ಅವರಿಗೆ ಅಡುಗೆ ಮಾಡಲು ಗೊತ್ತಿದ್ದರೆ ಇನ್ನೂ ಉತ್ತಮ’ ಎಂದರು.
