ಬೆಳ್ತಂಗಡಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂದರೆ ಗ್ರಾಮೀಣ ಭಾಗದ ಪ್ರಜಾಪ್ರಭುತ್ವದ ಹಬ್ಬ. ಮುಂಬರುವ ಡಿಸೆಂಬರ್-ಜನವರಿ ವೇಳೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸಮರಕ್ಕೆ ಮುಹೂರ್ತ ಫಿಕ್ಸ್ ಆಗುವ ಲಕ್ಷಣಗಳು ಕಾಣಿಸುತ್ತಿದ್ದು, ಕರಡು ಮೀಸಲಾತಿ ಪ್ರಕಟಣೆಯೊಂದಿಗೆ ಚುನಾವಣಾ ಕಹಳೆ ಮೊಳಗಿದೆ. ಮೀಸಲಾತಿ ಬದಲಾವಣೆಯಾಗದಿದ್ದಲ್ಲಿ ತಮ್ಮ ಕ್ಷೇತ್ರದ ಪೀಠಕ್ಕೇರಲು ಸ್ಥಳೀಯ ನಾಯಕರು ಮತ್ತು ಯುವ ಮುಖಂಡರ ಪಡೆ ತಂತ್ರ-ಪ್ರತಿತಂತ್ರಗಳನ್ನು ಹೆಣೆಯಲು ಶುರು ಮಾಡಿದೆ. ಈ ಪೈಕಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಭಾವಿ ಕ್ಷೇತ್ರವಾಗಿರುವ ಬೆಳ್ತಂಗಡಿಯ ‘ನಾರಾವಿ’ ಜಿ.ಪಂ. ಕ್ಷೇತ್ರದಲ್ಲಿ ಚುನಾವಣಾ ಗಮ್ಮತ್ತು ಈಗಾಗಲೇ ಶರುವಾಗಿದೆ.

ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಹಲವಾರು ಸ್ಥಳೀಯ ನಾಯಕರು ಹಾಗೂ ಯುವ ಮುಖಂಡರು ಸ್ಪರ್ಧೆಯಲ್ಲಿದ್ದರೂ, ಪಕ್ಷದ ಸಕ್ರಿಯ ಹಾಗೂ ಮುಂಚೂಣಿ ನಾಯಕರಾಗಿರುವ ಜಯಂತ್ ಕೋಟ್ಯಾನ್ ಅವರ ಹೆಸರು ಬಿಜೆಪಿ ಅಭ್ಯರ್ಥಿಯಾಗಿ ಬಲವಾಗಿ ಕೇಳಿಬರುತ್ತಿದೆ.
ರಾಜಕೀಯ ಅನುಭವ:
ಜಯಂತ್ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನ ಪ್ರಮುಖ ಬಿಜೆಪಿ ನಾಯಕರಾಗಿದ್ದು, ಹಿಂದೆ ಬೆಳ್ತಂಗಡಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸುವಲ್ಲಿ ಮತ್ತು ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಬಲಪಡಿಸುವಲ್ಲಿ ಇವರ ಪಾತ್ರ ಹಿರಿದಾಗಿದೆ.
ಈ ಹಿಂದೆ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಜನಪ್ರತಿನಿಧಿಯಾಗಿ ಆಡಳಿತಾತ್ಮಕ ಅನುಭವ ಹೊಂದಿರುವ ಇವರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿಯೂ ಜಿಲ್ಲಾ ಮಟ್ಟದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಇವರ ನಿರಂತರ ಕೊಡುಗೆಯನ್ನು ಗುರುತಿಸಿ ಪ್ರಸ್ತುತ ಮಂಗಳೂರು ವಿಭಾಗದ (ದಕ್ಷಿಣ ಕನ್ನಡ, ಉಡುಪಿ ಇತ್ಯಾದಿ ವ್ಯಾಪ್ತಿಯ) ಬಿಜೆಪಿ ಸಹಪ್ರಭಾರಿಯಾಗಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಾಮಾಜಿಕ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ:
ಕೇವಲ ರಾಜಕೀಯ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಜಯಂತ್ ಕೋಟ್ಯಾನ್ ಸಕ್ರಿಯರಾಗಿದ್ದಾರೆ. ಬೆಳ್ತಂಗಡಿಯ ಕೂಕ್ರಬೆಟ್ಟು ಸರಕಾರಿ ಶಾಲೆಯನ್ನು ‘ಸರಕಾರಿ ಶಾಲೆ ಉಳಿಸಿ-ಬೆಳೆಸಿ’ ಆಂದೋಲನದ ಅಧ್ಯಕ್ಷರಾಗಿ ವಹಿಸಿಕೊಂಡು, ಸ್ಥಳೀಯ ಶಾಲೆಯ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಶಾಸಕ ಹರೀಶ್ ಪೂಂಜಾ ಹಾಗೂ ಜಿಲ್ಲಾ ಮಟ್ಟದ ಹಿರಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇವರು, ಹಿಂದುತ್ವ ಮತ್ತು ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ನಾರಾವಿ ಜಿ.ಪಂ. ಕ್ಷೇತ್ರದಿಂದ ಜಯಂತ್ ಕೋಟ್ಯಾನ್ ಅವರಿಗೆ ಟಿಕೆಟ್ ಲಭಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

