ಸೋಮವಾರ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಭಯೋತ್ಪಾದಕ ದಾಳಿಯು ಯೋಜಿತ ಆತ್ಮಾಹುತಿ ಬಾಂಬ್ ದಾಳಿಯಲ್ಲ. ಈ ದಾಳಿಯ ಪ್ರಮುಖ ಶಂಕಿತ ಡಾ. ಮೊಹಮ್ಮದ್ ಉಮರ್ ಭಯಭೀತರಾಗಿ ಆಕಸ್ಮಿಕವಾಗಿ ಬಾಂಬ್ ಸ್ಫೋಟಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸೋಮವಾರ ಕೆಂಪು ಕೋಟೆ ಬಳಿಯ ಮೆಟ್ರೋ ಸ್ಟೇಷನ್ ಸಮೀಪ ನಡೆದ ಕಾರು ಸ್ಫೋಟದಲ್ಲಿ 8ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಉಂಟುಮಾಡಿದ ಶಂಕಿತನ ಐಇಡಿ ಅಪೂರ್ಣವಾಗಿತ್ತು. ಅದನ್ನು ಸರಿಯಾಗಿ ಜೋಡಿಸಲಾಗಿರಲಿಲ್ಲ. ಇದು ಬಾಂಬ್ ಸ್ಫೋಟದ ಪರಿಣಾಮವನ್ನು ಸೀಮಿತಗೊಳಿಸಿತು. ಒಂದುವೇಳೆ ಅದು ಉದ್ದೇಶಪೂರ್ವಕ ದಾಳಿಯಾಗಿದ್ದರೆ ಅದರ ಪರಿಣಾಮ ಇನ್ನೂ ಹೆಚ್ಚಾಗಿರುತ್ತಿತ್ತು. ದೆಹಲಿ-ಎನ್ಸಿಆರ್ ಮತ್ತು ಫರಿದಾಬಾದ್ನಲ್ಲಿ ರಾಷ್ಟ್ರವ್ಯಾಪಿ ಹೆಚ್ಚಿದ ಭದ್ರತಾ ಕ್ರಮಗಳು ಹಾಗೂ ಫರೀದಾಬಾದ್ನಲ್ಲಿ ತನ್ನ ಸಹಚರರ ಬಂಧನ ಶಂಕಿತನಿಗೆ ಭಯವನ್ನುಂಟುಮಾಡಿತ್ತು. ಈ ವೇಳೆ ಸ್ಫೋಟಕವನ್ನು ಸ್ಥಳಾಂತರಿಸಲು ಆತ ಪ್ರಯತ್ನಿಸುವಾಗ, ಆ ಸಾಧನವು ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ತನಿಖೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.









