ಮಂಗಳೂರು: ಕರಾವಳಿ ಕರ್ನಾಟಕದ ಲಕ್ಷಾಂತರ ತುಳು ಭಾಷಿಕರ ದಶಕಗಳ ಸುದೀರ್ಘ ಹೋರಾಟ ಹಾಗೂ ಡಿಜಿಟಲ್ ಚಳವಳಿಗಳಿಗೆ ಕೊನೆಗೂ ಸಕಾರಾತ್ಮಕ ಫಲ ಸಿಗುವ ಕ್ಷಣಗಳು ಹತ್ತಿರವಾಗಿವೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ರಾಜ್ಯ ಸರ್ಕಾರ ಅತ್ಯಂತ ಗಂಭೀರ ಪರಿಶೀಲನೆ ನಡೆಸುತ್ತಿದ್ದು, ಶೀಘ್ರವೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ.
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುಳಿವು ನೀಡಿದ್ದಾರೆ. ಈ ಹಿಂದೆ ರಚಿಸಲಾಗಿದ್ದ ತಜ್ಞರ ಸಮಿತಿಯ ವರದಿ ಹಾಗೂ ಆಡಳಿತಾತ್ಮಕ ಅಂಶಗಳನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಭರದಿಂದ ಸಿದ್ಧತೆ ನಡೆಸಿದೆ.


ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಬೊಮ್ಮಾಯಿ ಅವರಿದ್ದಾಗ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು ಘೋಷಿಸಲು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತಿ ತಿಳಿಸಿತ್ತು. ಈ ಸಂಬಂಧ ಮೋಹನ ಆಳ್ವ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ರಾಜ್ಯ ಸರ್ಕಾರ ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತ ಎರಡನೇ ಭಾಷೆಯಾಗಿ ಘೋಷಿಸುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ.
ಇತ್ತ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಮತ್ತು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಲು ಒತ್ತಾಯಿಸಿ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಡಿಜಿಟಲ್ ಅಭಿಯಾನಗಳು ನಡೆದಿದ್ದವು. ‘ಜೈ ತುಳುನಾಡ್’ ನಂತಹ ಪ್ರಮುಖ ಪ್ರಾದೇಶಿಕ ಸಂಘಟನೆಗಳು, ಇನ್ನಿತರ ತುಳುಪರ ಒಕ್ಕೂಟಗಳು ಆನ್ಲೈನ್ ಚಳವಳಿ ನಡೆಸಿದ್ದವು. ಇದೀಗ ಈ ಹೋರಾಟಗಳಿಗೆಲ್ಲ ಫಲ ಸಿಗುವ ಕಾಲ ಹತ್ತಿರ ಬಂದಿದೆ.
ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಪೂರಕ ಪ್ರಯತ್ನ: ತಂಗಡಗಿ ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ ಅವರು, ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ ಎಂದರು.
ವರದಿ ಸಲ್ಲಿಕೆ, ನಂತರದ ಹಂತಗಳು ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ, ಸಂಸ್ಕೃತಿ ಹಾಗೂ ತುಳು ಶಾಸನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 14.02.2023ರಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದರ ಮುಂದಿನ ಹಂತದಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಗಳನ್ನು ಅಧ್ಯಯನ ಮಾಡಲು ನಮ್ಮ ಸರ್ಕಾರವು 30.07.2025ರಂದು ಅಧ್ಯಯನ ತಂಡ ರಚಿಸಿತ್ತು.
ತಂಡವು 19 ಮತ್ತು 20 ಜನವರಿ 2026ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಕಾನೂನು ಚೌಕಟ್ಟು ಹಾಗೂ ಅನುಷ್ಠಾನದ ಮಾದರಿಗಳನ್ನು ಪರಿಶೀಲಿಸಿ, 2026ರ ಕಳೆದ ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ವಿವರಿಸಿದರು. ಶೀಘ್ರವೇ ಮುಂದಿನ ಎಲ್ಲ ಹಂತಗಳು ಪೂರ್ಣಗೊಂಡು ತುಳುಗೆ ಕಾನೂನು ಮಾನ್ಯತೆ ಸಿಗಲಿದೆ. ತುಳು ಭಾಷೆಯ ಗೌರವ, ಸಂರಕ್ಷಣೆ ತುಳು ನಮ್ಮ ಕರಾವಳಿಯ ಭಾಷೆ ಮಾತ್ರವಲ್ಲ. ಅದು ಕರ್ನಾಟಕದ ಶ್ರೀಮಂತ ಭಾಷಾ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದಿರುವ ಸಚಿವರು ತುಳುವಿನಲ್ಲಿ ‘ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು’ (“ನಾನು ಯಾವಾಗಲೂ ಜನರ ಭಾವನೆಗಳ ಜೊತೆ ಇರುತ್ತೇನೆ) ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನಲ್ಲಿ ತುಳು ಭಾಷೆ ಮಾತನಾಡುವವರಿದ್ದಾರೆ. ಈ ಭಾಷೆಗೆ ತನ್ನದೇ ಆದ ಇತಿಹಾಸ ಇದ್ದು, ತುಳು ಭಾಷಿಗಳು ಕರ್ನಾಟಕ, ದೇಶ ಹಾಗೂ ವಿದೇಶಗಳಲ್ಲೂ ವಾಸಿಸುತ್ತಿದ್ದಾರೆ. ಇವರ ಜನಸಂಖ್ಯೆ ಸುಮಾರು 1 ಕೋಟಿ ಎನ್ನಲಾಗಿದೆ.



