ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಅಧಿಕಾರಿಗಳು ತಮ್ಮ ಅನುಭವಕ್ಕೆ ತಕ್ಕಂತೆ ಉತ್ತಮವಾಗಿ ಕೆಲಸ ಮಾಡಬೇಕು. ಕೆಲಸದಲ್ಲಿ ವಿಳಂಬ ಮಾಡಿ, ಸಮಯ ಹಾಳು ಮಾಡುವ ಅಧಿಕಾರಿಗಳು ಜಿಲ್ಲೆಯಿಂದ ತೆರಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಮಂಗಳವಾರ (ಸೆ.15) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ 2-3 ವರ್ಷಗಳಿಂದ ಅಧಿಕಾರದಲ್ಲಿರುವವರಿಗೆ ಸಾಕಷ್ಟು ಅನುಭವವಿದೆ. ಹೀಗಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ಸಚಿವರು ಸೂಚಿಸಿದರು.ಅಧಿಕಾರಿಗಳು ಕಾಮಗಾರಿಗಳನ್ನು ವಿಳಂಬ ಮಾಡುವುದು, ಸಮಯ ಹಾಳು ಮಾಡುವುದು ಅಥವಾ ಕೆಲಸಗಳನ್ನು ಅಪೂರ್ಣವಾಗಿ ಬಿಟ್ಟುಕೊಡುವುದನ್ನು ಸಹಿಸುವುದಿಲ್ಲ. ಜವಾಬ್ದಾರಿ ವಹಿಸಿಕೊಂಡು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದವರು ಜಿಲ್ಲೆಯಿಂದ ತೆರಳುವುದು ಉತ್ತಮ ಎಂದು ಯು.ಟಿ. ಖಾದರ್ ಎಚ್ಚರಿಕೆ ನೀಡಿದರು. ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಜನರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.



