ವೇಣೂರು, ಸೆ.21: ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬಂದಿ ಶ್ರಮದಿಂದ 67 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ 456.09 ಕೋ.ರೂ. ವ್ಯವಹಾರ ನಡೆಸಿ 2.04 ಕೋ.ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ತಿಳಿಸಿದರು.
ವೇಣೂರು ಬಾಹುಬಲಿ ಸಭಾಭವನದಲ್ಲಿ ರವಿವಾರ ನಡೆದ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರದಿ ವರ್ಷದಲ್ಲಿ 56.21 ಕೋಟಿ ಠೇವಣಿ ಇದ್ದು ಕಳೆದ ವರ್ಷಕ್ಕಿಂದ ಶೇ. 18.12 ಹೆಚ್ಚಾಗಿದೆ. ಸದಸ್ಯರಲ್ಲಿ ನಮ್ಮ ಸಂಘ ಎಂಬ ಅಭಿಮಾನವಿದೆ. ಇದರಿಂದಲೇ ಸಂಘ ಈ ಮಟ್ಟದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಸದಸ್ಯರು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸದಸ್ಯರು ಅನಾರೋಗ್ಯ ಅಥವಾ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಸಂಘದ ವತಿಯಿಂದ ನೆರವು ನೀಡಲಾಗುತ್ತಿದೆ. ಏಳು ವರ್ಷಗಳಿಂದ ಸತತವಾಗಿ 1 ಕೋಟಿಗೂ ಅಧಿಕ ಲಾಭ ಗಳಿಸುತ್ತಿದ್ದು, ಈ ಬಾರಿ 2.04 ಕೋಟಿ ಲಾಭ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.


ಸಂಘದ ವತಿಯಿಂದ ಕೃಷಿ ಮಾಹಿತಿ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಸಂಘವು ಒಂಬತ್ತು ಬಾರಿ ಪ್ರಶಸ್ತಿ ಪಡೆದಿರುವುದು ಸಂಘದ ಹೆಗ್ಗಳಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರು ಹಾಗೂ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಧನ ನೀಡ ಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಭತ್ತದ ಕೃಷಿಕರಿಗೆ ದನ ಸಹಾಯ ವಿತರಿಸಲಾಯಿತು. ಸಭೆಯಲ್ಲಿ ಸದಸ್ಯರು ಅಭಿಪ್ರಾಯ ತಿಳಿಸಿದರು.
ಕಾರ್ಯ ನಿರ್ವಹಣಾಧಿಕಾರಿ ಜಯಂತ ಪೂಜಾರಿ ವರದಿ ವಾಚಿಸಿ, ಮುಂದಿನ ಕಾರ್ಯಚಟುವಟಿಕೆಗಳನ್ನು ತಿಳಿಸಿದರು. ನಿರ್ದೇಶಕರಾದ ರಾಮದಾಸ್ ನಾಯಕ್, ಸಂದೀಪ್ ಹೆಗ್ಡೆ ಎಂ.ಆರ್. ಸಂತೋಷ್, ನಾಗಪ್ಪ ಆಶಾ, ರೋಹಿಣಿ, ಕೃಷ್ಣಪ್ಪ ಮೂಲ್ಯ, ಪ್ರಶಾಂತ್, ರಾಜು ನಾಯ್ಕ ಪ್ರವೀಣ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಮುಖ್ಯ ಉಪಾಧ್ಯಕ್ಷ ರತ್ನಾಕರ ಬಿ. ವಂದಿಸಿದರು. ಲೆಕ್ಕಿಗ ಭರತ್ ರಾಜ್ ಹಾಗೂ ಸಿಬಂದಿ ಸಹಕರಿಸಿದರು.



