ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಎಂದರೆ ಎಲ್ಲರಿಗೂ ಸಡಗರ, ಸಂಭ್ರಮ. ಆದರೆ ಈ ಸಂದರ್ಭದಲ್ಲಿ, ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜೊತೆಗೆ, ಈ ಪಟಾಕಿ ಸಿಡಿತದಿಂದ ಪ್ರಾಣಹಾನಿ ಪ್ರಕರಣಗಳೂ ಹೆಚ್ಚಾಗುತ್ತಿವೆ.



ಈ ಹಿನ್ನೆಲೆಯಲ್ಲಿ 2026ನೇ ಸಾಲಿನ ದೀಪಾವಳಿ ಹಬ್ಬವನ್ನ ಪರಿಸರ ಸ್ನೇಹಿ ದೀಪಾವಳಿಯಾಗಿ ಆಚರಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.


ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಮಾರ್ಗಸೂಚಿ ಸಾಮಾನ್ಯ ಪಟಾಕಿಗಳಲ್ಲಿ ಬಳಸುವ ರಾಸಾಯನಿಕ ವಸ್ತುಗಳು ಸ್ಫೋಟಗೊಂಡಾಗ ವಾತಾವರಣದಲ್ಲಿ ಅಪಾರ ಪ್ರಮಾಣದ ವಿಷಾನಿಲ ಬಿಡುಗಡೆಯಾಗಿ ವಾಯುಮಾಲಿನ್ಯ ಉಂಟಾಗುತ್ತದೆ. ವರದಿಗಳ ಆಧಾರದ ಮೇಲೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪಟಾಕಿ ಸಿಡಿಸಲು ಕಟ್ಟುನಿಟ್ಟಿನ ಸಮಯವನ್ನ ನಿಗದಿಪಡಿಸಿದೆ. ನ್ಯಾಯಾಲಯದ ಆದೇಶದಂತೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇವಲ ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ (ಕೇವಲ 2 ಗಂಟೆ) ಮಾತ್ರ ಪಟಾಕಿಗಳನ್ನ ಸಿಡಿಸಲು ಅವಕಾಶ ನೀಡಲಾಗಿದೆ. ಉಳಿದ ಯಾವುದೇ ಸಮಯದಲ್ಲಿ ಪಟಾಕಿ ಸಿಡಿಸುವುದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಡ್ಡಾಯವಾಗಿ ಹಸಿರು ಪಟಾಕಿಗಳ ಬಳಕೆ
ಈ ಬಾರಿಯ ಹಬ್ಬದಲ್ಲಿ ಕೇವಲ ಹಸಿರು ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ಮಾತ್ರ ಅವಕಾಶವಿದ್ದು, ಉಳಿದೆಲ್ಲಾ ರೀತಿಯ ಪಟಾಕಿಗಳನ್ನ ಬ್ಯಾನ್ ಮಾಡಲಾಗಿದೆ. ಹಸಿರು ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹೊಗೆ ಮತ್ತು ಶಬ್ದವನ್ನ ಉಂಟುಮಾಡುತ್ತವೆ.
ಸಾರ್ವಜನಿಕರು ಪಟಾಕಿಗಳನ್ನ ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು. ಪಟಾಕಿ ಬಾಕ್ಸ್ಗಳ ಮೇಲೆ ಹಸಿರು ಪಟಾಕಿಗಳ ಅಧಿಕೃತ ಗುರುತು ಹಾಗೂ ಕ್ಯೂಆರ್ ಕೋಡ್ ಇರುವುದನ್ನ ಕಡ್ಡಾಯವಾಗಿ ಪರಿಶೀಲಿಸಬೇಕು. ನಕಲಿ ಪಟಾಕಿಗಳ ಮಾರಾಟದ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ
ರಾಜ್ಯದಾದ್ಯಂತ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಸಾಗಾಣಿಕೆ ಮತ್ತು ಮಾರಾಟವನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಒಂದು ವೇಳೆ ನಿಷೇಧಿತ ಪಟಾಕಿಗಳ ಮಾರಾಟ ಅಥವಾ ಬಳಕೆ ಕಂಡುಬಂದಲ್ಲಿ, ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿರಂತರ ಹದ್ದಿನ ಕಣ್ಣಿಡಲಿವೆ. ಅಲ್ಲದೆ, ಪಟಾಕಿ ಸಿಡಿಸಿದ ನಂತರ ಸಾರ್ವಜನಿಕ ಸ್ಥಳಗಳು ಹಾಗೂ ವಸತಿ ಪ್ರದೇಶಗಳಲ್ಲಿ ಉಂಟಾಗುವ ತ್ಯಾಜ್ಯವನ್ನ ತಕ್ಷಣವೇ ತೆರವುಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರ ಜವಾಬ್ದಾರಿ, ಜಾಗೃತಿ ಅಭಿಯಾನ
ವಾಯು ಮತ್ತು ಶಬ್ದ ಮಾಲಿನ್ಯವು ಮಕ್ಕಳು, ವೃದ್ಧರು, ರೋಗಿಗಳು ಹಾಗೂ ಮೂಕ ಪ್ರಾಣಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಆಸ್ಪತ್ರೆಗಳು, ವೃದ್ಧಾಶ್ರಮಗಳು, ಶಾಲೆಗಳು ಮತ್ತು ಸೂಕ್ಷ್ಮ ಪ್ರದೇಶಗಳ ಸಮೀಪ ಪಟಾಕಿ ಸಿಡಿಸುವುದನ್ನು ಸಾರ್ವಜನಿಕರು ಕೈಬಿಡಬೇಕು. ಈ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ. “ಈ ಬಾರಿಯ ದೀಪಾವಳಿಯನ್ನ ಪರಿಸರ ಸ್ನೇಹಿಯಾಗಿ ಆಚರಿಸೋಣ, ಹಸಿರು ಪಟಾಕಿಗಳನ್ನ ಮಾತ್ರ ಬಳಸಿ, ಮಾಲಿನ್ಯವನ್ನ ಕಡಿಮೆ ಮಾಡಿ ಆರೋಗ್ಯಕರ ಮತ್ತು ಸ್ವಚ್ಛ ಪರಿಸರವನ್ನು ಕಾಪಾಡೋಣ” ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ನಾಡಿನ ಜನತೆಗೆ ಸಂದೇಶ ರವಾನಿಸಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಇಲಾಖೆ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
