ಬೆಂಗಳೂರು, ನ.6: ಕರ್ನಾಟಕ ಸರ್ಕಾರವು ಎಲ್ಲಾ 48,527 ಸರ್ಕಾರಿ ಶಾಲೆಗಳನ್ನು ದ್ವಿಭಾಷಾ ಆಂಗ್ಲ ಮಾಧ್ಯಮಕ್ಕೆ ಪರಿವರ್ತಿಸಲು ನಿರ್ಧರಿಸಿದೆ. ಪೋಷಕರ ಬೇಡಿಕೆಗೆ ಸ್ಪಂದಿಸಿ, 2026ರ ವೇಳೆಗೆ ಹಂತ ಹಂತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, ಶಿಕ್ಷಕರ ತರಬೇತಿ ಮತ್ತು ನೇಮಕಾತಿ ಸವಾಲುಗಳನ್ನು ಎದುರಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಇದು ಮಹತ್ವದ ಹೆಜ್ಜೆಯಾಗಿದೆ.



ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ತಡೆಯಲು ಮತ್ತು ಪೋಷಕರ ಇಷ್ಟಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆರಂಭಿಸುವ ಮೂಲಕ ಅವುಗಳನ್ನು ದ್ವಿಭಾಷಾ ಶಾಲೆಗಳನ್ನಾಗಿ ಪರಿವರ್ತಿಸಲು ಶಿಕ್ಷಣ ಇಲಾಖೆ ಬೃಹತ್ ಯೋಜನೆ ರೂಪಿಸಿದೆ.


ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಮಹತ್ವದ ನಿರ್ಧಾರ ಬಗ್ಗೆ ತಿಳಿಸಿದ್ದಾರೆ, ಪೋಷಕರಿಗೆ ತಮ್ಮ ಮಕ್ಕಳ ಬೋಧನಾ ಮಾಧ್ಯಮವನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸೂಕ್ತ ಮತ್ತು ಅರ್ಹ ಶಿಕ್ಷಕರ ತರಬೇತಿ ಮತ್ತು ನೇಮಕಾತಿಯ ಅಗತ್ಯವಿದ್ದ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದೇವೆ ಎಂದು ಅವರು ವಿವರಿಸಿದ್ದಾರೆ.
ಯುಡಿಐಎಸ್ಇ ಪ್ಲಸ್ (UDISE+ 2025-26) ದತ್ತಾಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 48,527 ಸರ್ಕಾರಿ ಶಾಲೆಗಳಿದ್ದು, ಇವೆಲ್ಲವನ್ನೂ ಹಂತ ಹಂತವಾಗಿ ದ್ವಿಭಾಷಾ ಶಾಲೆಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. 2019-20ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇದುವರೆಗೆ 6,539 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗಗಳನ್ನು ಆರಂಭಿಸಲಾಗಿದೆ.
2024-25ರ ಸಾಲಿನಲ್ಲಿ ಸುಮಾರು 2,000 ಶಾಲೆಗಳಿಗೆ ಅನುಮತಿ ನೀಡಲಾಗಿದ್ದರೆ, 2025-26ರಲ್ಲಿ ಹೆಚ್ಚುವರಿಯಾಗಿ 4,134 ಶಾಲೆಗಳನ್ನು ದ್ವಿಭಾಷಾ ವ್ಯಾಪ್ತಿಗೆ ತರಲಾಗಿತ್ತು. ಈ ಯೋಜನೆಯಡಿ ಸೇರಿದ ಪ್ರಥಮ ಹಂತದ ವಿದ್ಯಾರ್ಥಿಗಳು ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿರುವ ಒಟ್ಟು 1,465 ಸರ್ಕಾರಿ ಶಾಲೆಗಳ ಪೈಕಿ ಈಗಾಗಲೇ 1,103 ಶಾಲೆಗಳಿಗೆ (ಬೆಂಗಳೂರು ದಕ್ಷಿಣ – 730, ಬೆಂಗಳೂರು ಉತ್ತರ – 373) ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾದ್ಯಮ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.
ಹೆಚ್ಚುತ್ತಿರುವ ಇಂಗ್ಲಿಷ್ ಮಾಧ್ಯಮದ ಬೇಡಿಕೆ:
ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ಭಾರಿ ಬೇಡಿಕೆ ವ್ಯಕ್ತವಾಗಿದೆ. ಕಳೆದ ವರ್ಷ ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳಿಂದ ಬರೋಬ್ಬರಿ 11,555 ಶಾಲೆಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದವು. ಆರಂಭಿಕ ಹಂತವಾಗಿ ಪ್ರತಿ ತಾಲೂಕಿನಲ್ಲಿ ಗರಿಷ್ಠ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಮೊದಲ 15 ಶಾಲೆಗಳನ್ನು ಆಯ್ಕೆ ಮಾಡಿ ದ್ವಿಭಾಷಾ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು.
ಶಿಕ್ಷಣ ತಜ್ಞರ ಎಚ್ಚರಿಕೆ ಹಾಗೂ ಶಿಕ್ಷಕರ ತರಬೇತಿ ಸವಾಲು:
ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದ್ದರೂ, ಶಿಕ್ಷಣ ತಜ್ಞರು ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ದ್ವಿಭಾಷಾ ಮಾಧ್ಯಮದಲ್ಲಿ ಕಾರ್ಯಾಚರಿಸುತ್ತಿರುವ ಶಾಲೆಗಳ ಪ್ರಾಯೋಗಿಕ ಯಶಸ್ಸು ಹಾಗೂ ಅಲ್ಲಿನ ಕಷ್ಟ-ಸುಖಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಯನ್ನು ವಿಸ್ತರಿಸಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಕೇವಲ 3 ದಿನಗಳ ಸಾಂಪ್ರದಾಯಿಕ ತರಬೇತಿಯಿಂದ ಶಿಕ್ಷಕರು ಇಂಗ್ಲಿಷ್ನಲ್ಲಿ ಕಲ್ಪಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಶಿಕ್ಷಕರಿಗೆ ಸಂವಹನ ಹಾಗೂ ಬೋಧನೆ ಎರಡೂ ವಿಷಯಗಳಲ್ಲಿ ಗುಣಮಟ್ಟದ ತರಬೇತಿ ನೀಡುವುದು ಅತ್ಯಂತ ಅಗತ್ಯವಾಗಿದೆ.
