ದೇಶದ ನಾಗರಿಕ ವಿಮಾನಯಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದರೂ ಸಹ, ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೆಲವು ಆಯ್ದ ಸ್ಥಳಗಳನ್ನು ಹಾರಾಟ ನಿಷೇಧಿತ ವಲಯಗಳಾಗಿ ಗುರುತಿಸಲಾಗಿದೆ. ಅದರಂತೆ, ಈ ಪ್ರದೇಶಗಳ ಮೇಲೆ ಯಾವುದೇ ವಿಮಾನ, ಹೆಲಿಕಾಪ್ಟರ್ ಅಥವಾ ಆಧುನಿಕ ಡ್ರೋನ್ಗಳು ಹಾರಾಡುವುದು ಕಟ್ಟುನಿಟ್ಟಾದ ಅಪರಾಧವಾಗಿದ್ದು, ಇದರ ಹಿಂದಿನ ಕಾರಣ ಮತ್ತು ಆ ಸ್ಥಳಗಳು ಯಾವುವು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ:
ಕೆಲ ದಿನಗಳಿಂದ ಇಂಡಿಗೋ ಸಂಸ್ಥೆಯ ತಾಂತ್ರಿಕ ಕಾರಣಗಳಿಂದ ಭಾರತದ ವಿಮಾನಯಾನ ವಲಯವೇ ಬೆಚ್ಚಿಬಿದ್ದಿದ್ದು, ಅದಿನ್ನೂ ಸುಧಾರಿಸಲು ಇನ್ನೂ ಹಲವು ದಿನಗಳೇ ಬೇಕಾಗಬಹುದು ಎನ್ನಲಾಗಿದೆ. ಇದರ ನಡುವೆ, ಭಾರತದ ಕೆಲವು ಪ್ರದೇಶಗಳಲ್ಲಿ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎನ್ನುವುದು ಗೊತ್ತಾ? ಕೇವಲ ವಿಮಾನಯಾನ ಮಾತ್ರವಲ್ಲ, ಅದರ ಜೊತೆಗೆ ಹೆಲಿಕಾಪ್ಟರ್ ಮತ್ತು ಡ್ರೋನ್ಗಳ ಹಾರಾಟವನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆ ಸ್ಥಳಗಳ ಕುರಿತ ಮಾಹಿತಿ ಇಲ್ಲಿದೆ
ಯಾಕೆ ಈ ನಿರ್ಬಂಧ?:
ಈ ನಿಯಮಗಳು ಪ್ರಮುಖವಾಗಿ ದೇಶದ ಪ್ರಮುಖ ಕಟ್ಟಡಗಳು ಜೊತೆಗೆ ಪ್ರದೇಶಗಳನ್ನು ರಕ್ಷಿಸುವ ಉದ್ದೇಶದಿಂದ ಜಾರಿಯಲ್ಲಿವೆ. ಹಾಗಾಗಿ, ಸರ್ಕಾರಿ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು ಮತ್ತು ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಸುತ್ತಮುತ್ತಲಿನ ಹಾರಾಟವನ್ನು ನಿರ್ಬಂಧಿಸಲಾಗಿದ್ದು, ಇದರಿಂದ ಸಂಭವನೀಯ ಅಪಾಯಗಳನ್ನು ತಪ್ಪಿಸಿ, ರಾಷ್ಟ್ರೀಯ ಭದ್ರತೆಯನ್ನು ಉನ್ನತ ಮಟ್ಟದಲ್ಲಿ ಕಾಪಾಡಲು ಸಹಾಯವಾಗುತ್ತದೆ. ಈ ಪ್ರದೇಶಗಳ ಮೇಲೆ ಪ್ರವೇಶ ನಿಷೇಧವು ನಿರಂತರವಾಗಿದ್ದು, ಯಾವುದೇ ವಿನಾಯಿತಿಗಳು ಇಲ್ಲದೆ ಕಟ್ಟುನಿಟ್ಟಾಗಿ ಅನುಸರಿಸಲ್ಪಡುತ್ತದೆ.

ರಾಷ್ಟ್ರಪತಿ ಭವನ, ನವದೆಹಲಿ:
ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ನಿವಾಸವು ದೇಶದ ಅತ್ಯಂತ ಮುಖ್ಯ ಸ್ಥಳಗಳಲ್ಲಿ ಒಂದಾಗಿದೆ. ಈ ಕಾರಣಕ್ಕಾಗಿಯೇ, ರಾಷ್ಟ್ರಪತಿ ಭವನದ ಮೇಲಿನ ಹಾರಾಟವನ್ನು ಶಾಶ್ವತವಾಗಿ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅದರಂತೆ, ಇಲ್ಲಿ ವಿಮಾನ, ಹೆಲಿಕಾಪ್ಟರ್ ಮತ್ತು ಡ್ರೋನ್ಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗಾಗಿ, ಈ ನಿಯಮವು ರಾಷ್ಟ್ರಪತಿಗಳ ಭದ್ರತೆಯನ್ನು ಖಾತ್ರಿಪಡಿಸುವುದರೊಂದಿಗೆ, ರಾಷ್ಟ್ರ ರಾಜಧಾನಿಯ ಕೇಂದ್ರಭಾಗದಲ್ಲಿ ಸುರಕ್ಷತೆಯನ್ನು ಹೆಚ್ಚಿಸುತ್ತದೆ.
ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿ:
ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುವ ತಿರುಪತಿ ದೇವಸ್ಥಾನವು ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಅದರಂತೆ, ಭಕ್ತರ ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿಯೇ, ದೇವಸ್ಥಾನದ ಮೇಲಿನ ಹಾರಾಟವನ್ನು ಪ್ರವೇಶ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಈ ನಿಯಮವು ಧಾರ್ಮಿಕ ಸ್ಥಳಗಳ ರಕ್ಷಣೆಯಲ್ಲಿ ಸಂಭವನೀಯ ಅಪಾಯಗಳನ್ನು ತಪ್ಪಿಸುತ್ತದೆ.
ಕೇಂದ್ರೀಯ ಸೆಕ್ರೇಟರಿಯಟ್, ನವದೆಹಲಿ:
ಮಧ್ಯ ದೆಹಲಿಯಲ್ಲಿರುವ ಈ ಪ್ರದೇಶದಲ್ಲಿ ಸಂಸತ್ತು, ಪ್ರಧಾನಮಂತ್ರಿಗಳ ನಿವಾಸ, ಕೇಂದ್ರ ಸಚಿವಾಲಯಗಳು ಮತ್ತು ಹಲವು ಮುಖ್ಯ ಸರ್ಕಾರಿ ಇಲಾಖೆಗಳಿವೆ. ಈ ಮಹತ್ವವನ್ನು ಗಮನಿಸಿ, ಮಧ್ಯ ದೆಹಲಿಯ ಪ್ರದೇಶದಲ್ಲಿ ವಿಮಾನ, ಹೆಲಿಕಾಪ್ಟರ್ ಮತ್ತು ಡ್ರೋನ್ಗಳ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೆಚ್ಚುವರಿಯಾಗಿ, ಇಲ್ಲಿ ಬಿಗಿಯಾದ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿದ್ದು, ಈ ನಿಯಮಗಳು ರಾಜಕೀಯ ಕೇಂದ್ರದ ಸುರಕ್ಷತೆಯನ್ನು ಉನ್ನತ ಮಟ್ಟದಲ್ಲಿ ಕಾಪಾಡುತ್ತವೆ ಮತ್ತು ರಾಷ್ಟ್ರೀಯ ಆಡಳಿತದ ನಿರಂತರತೆಯನ್ನು ಖಾತ್ರಿಪಡಿಸುತ್ತವೆ.
ತಾಜ್ ಮಹಲ್, ಉತ್ತರಪ್ರದೇಶ:
ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿದ್ದು, ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ಈ ಸ್ಮಾರಕದ ಸೌಂದರ್ಯ ಹಾಗೂ ರಚನೆಯ ಸಮತೋಲನಕ್ಕೆ ಹಾನಿಯಾಗದಂತೆ ತಾಜ್ ಮಹಲ್ ಸುತ್ತಲಿನ ವಾಯುಪ್ರದೇಶವನ್ನು no-flying zone ಆಗಿ ಘೋಷಿಸಲಾಗಿದೆ. ಅದರಂತೆ, ಕಂಪನ, ಶಬ್ದ ಮಾಲಿನ್ಯ ಅಥವಾ ವಾಯು ಮಾಲಿನ್ಯದಿಂದ ಸ್ಮಾರಕಕ್ಕೆ ಸಂಭವಿಸಬಹುದಾದ ಹಾನಿಯನ್ನು ತಪ್ಪಿಸಲು ಈ ಕ್ರಮ ಅಗತ್ಯವಾಗಿದೆ.
ಬಾಬಾ ಅಣು ಸಂಶೋಧನಾ ಕೇಂದ್ರ (BARC): ಮುಂಬೈ ಸಮೀಪದಲ್ಲಿರುವ ಬಾಬಾ ಪರಮಾಣು ಸಂಶೋಧನಾ ಕೇಂದ್ರವು ದೇಶದ ಪ್ರಮುಖ ಪರಮಾಣು ಸಂಶೋಧನಾ ಸಂಸ್ಥೆಯಾಗಿದೆ. ರಾಷ್ಟ್ರೀಯ ಭದ್ರತೆ, ಪರಮಾಣು ರಹಸ್ಯಗಳು ಮತ್ತು ಸಂವೇದನಾಶೀಲ ಯೋಜನೆಗಳು ನಡೆಯುವ ಕಾರಣದಿಂದ, ಈ ಪ್ರದೇಶದ ಮೇಲೆ ಯಾವುದೇ ರೀತಿಯ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.






