ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಾಗೂ ತೆಲುಗು ನಟಿ ನಿಖಿತಾ ರಾವಲ್ ಅವರಿಗೆ ಮುಜುಗರದ ಅನುಭವವಾಗಿದೆ. ಆಗಸ್ಟ್ 8 ರಂದು ನಡೆದ ಅದ್ಧೂರಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡುತ್ತಿದ್ದ ನಟಿಗೆ, ಮಹಿಳಾ ಅಭಿಮಾನಿಯೊಬ್ಬರು ಏಕಾಏಕಿ ಬಲವಂತವಾಗಿ ಲಿಪ್ ಕಿಸ್ ನೀಡಿದ ಘಟನೆ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.


ಸಂಜೆ ನಡೆದ ಈ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಆಗಮಿಸಿದ್ದ ನಿಖಿತಾ ರಾವಲ್, ರೆಡ್ ಕಾರ್ಪೆಟ್ ಮೇಲೆ ಕ್ಯಾಮೆರಾಗಳಿಗೆ ಮುಗುಳುನಗುತ್ತಾ ಪೋಸ್ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಮಹಿಳಾ ಅಭಿಮಾನಿಯೊಬ್ಬರು ನಟಿಯೊಂದಿಗೆ ಸೆಲ್ಫಿ ಕೇಳಿದ್ದಾರೆ. ಅಭಿಮಾನಿಯ ಆಸೆಯಂತೆ ನಿಖಿತಾ ಕೂಡ ಪ್ರೀತಿಯಿಂದಲೇ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಸೆಲ್ಫಿ ಬಳಿಕ ಆ ಮಹಿಳೆ ನಟಿಯನ್ನು ತಬ್ಬಿಕೊಂಡಿದ್ದಾರೆ. ಇದನ್ನು ಸಾಮಾನ್ಯ ಅಭಿಮಾನದ ಕ್ಷಣವೆಂದು ನಟಿ ಭಾವಿಸಿದ್ದರು.
ಆದರೆ, ಮರುಕ್ಷಣವೇ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಗಟ್ಟಿಮುಟ್ಟಾಗಿದ್ದ ಆ ಮಹಿಳಾ ಅಭಿಮಾನಿ ಏಕಾಏಕಿ ನಟಿಯನ್ನು ಬಲವಾಗಿ ಹಿಡಿದುಕೊಂಡು ಲಿಪ್ ಕಿಸ್ ನೀಡಲು ಪ್ರಾರಂಭಿಸಿದ್ದಾರೆ. ಆಘಾತಕ್ಕೊಳಗಾದ ನಿಖಿತಾ ರಾವಲ್ ಆಕೆಯ ಕೈಯಿಂದ ಬಿಡಿಸಿಕೊಳ್ಳಲು, ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲ ಸೆಕೆಂಡ್ಗಳ ಕಾಲ ಬಲವಂತವಾಗಿ ಚುಂಬಿಸಿದ ಬಳಿಕ, ಕೊನೆಗೆ ಕೆನ್ನೆಗೆ ಮತ್ತೊಮ್ಮೆ ಕಿಸ್ ನೀಡಿ ಆ ಮಹಿಳೆ ಪಕ್ಕಕ್ಕೆ ಸರಿದಿದ್ದಾರೆ.
ಈ ದಿಢೀರ್ ಘಟನೆಯಿಂದ ಗಾಬರಿಗೊಂಡ ನಟಿ ನಿಖಿತಾ, ಕೆಲ ಕಾಲ ಮಾತು ಬಾರದೆ ಸ್ಥಬ್ಧರಾಗಿ ನಿಂತುಬಿಟ್ಟಿದ್ದರು. ತಕ್ಷಣವೇ ಕಾರ್ಯಕ್ರಮದ ಭದ್ರತಾ ಸಿಬ್ಬಂದಿ ಆಗಮಿಸಿ ಆ ಮಹಿಳೆಯನ್ನು ಆಚೆಗೆ ಕರೆದೊಯ್ದಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.



