ಬೆಳ್ತಂಗಡಿ, ಅ.29: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡಯವೆಯೇ ಸೌಜನ್ಯ ಹಾಗೂ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಮಂಗಳೂರು ಎಸ್ಐಟಿ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಕುಸುಮಾವತಿ ಅವರು ಸೌಜನ್ಯ ತಾಯಿ ಹೌದಾ ಎಂಬ ಬಗ್ಗೆ ತನಿಖೆ ನಡೆಸುವಂತೆ ಧರ್ಮಸ್ಥಳ ಗ್ರಾಮಸ್ಥ ಕಿಶೋರ್ ಎಂಬವರು ಆಗ್ರಹಿಸಿದ್ದಾರೆ. ಈ ಮೂಲಕ ಸೌಜನ್ಯ ಕೇಸ್ ಸಂಬಂಧ ಮತ್ತೊಂದು ಹೊಸ ಬೆಳವಣಿಗೆ ಆದಂತಾಗಿದೆ.

‘ಕುಸುಮಾವತಿ ಸಲ್ಲಿಸಿರುವ ಪ್ರಮಾಣ ಪತ್ರವೇ ಸುಳ್ಳು’
2015ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದ ಇಂದಿರಾವತಿ ಕೋಂ ಚಂದಪ್ಪ ಗೌಡರಿಗೆ ಜಾಗ ಮಂಜೂರಾಗಿತ್ತು. ಆದರೆ ಸದ್ಯ ಈ ಜಾಗ ಕುಸುಮಾವತಿ ಹೆಸರಿನಲ್ಲಿ ಸ್ವಾಧೀನ ಇರುವ ಬಗ್ಗೆ ದಾಖಲೆ ಇವೆ. ಹೀಗಾಗಿ ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸ್ತವ್ಯ ಇಲ್ಲ ಎಂದು ಕಿಶೋರ್ ದೂರಿದ್ದಾರೆ. ಈ ಬಗ್ಗೆ ಎಸ್ಐಟಿ ರಚನೆಗೂ ಮೊದಲೇ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೂ ಅವರು ಕಂಪ್ಲೇಂಟ್ ನೀಡಿದ್ದಾರೆ. ಇಂದಿರಾವತಿ ಇರುವಿಕೆ ಹಾಗೂ ಮತ್ತೊಬ್ಬರ ಗುರುತಿನ ವಂಚನೆ ಬಗ್ಗೆ ತನಿಖೆಗೆ ಕಿಶೋರ್ ಆಗ್ರಹಿಸಿದ್ದು, ಇಂದಿರಾವತಿ ಮತ್ತು ತಾನು ಒಬ್ಬರೇ ಎಂದು ಕುಸುಮಾವತಿ ಸಲ್ಲಿಸಿರುವ ಪ್ರಮಾಣ ಪತ್ರವೇ ಸುಳ್ಳು ಎಂದವರು ಆರೋಪಿಸಿದ್ದಾರೆ.

‘ಜಮೀನಿನ ವಿಚಾರಕ್ಕೆ ಕೊಲೆ ನಡೀತಾ?’
ಆಧಾರ್, ಪಡಿತರ ಚೀಟಿ ದಾಖಲೆಗಳಲ್ಲಿ ವ್ಯತ್ಯಾಸ ಇವೆ. ಹೀಗಾಗಿ ಸೌಜನ್ಯ ಮತ್ತು ಆಕೆಯ ಸಹೋದರಿ ಸೌಮ್ಯ ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಸಂಶಯವನ್ನು ಕಿಶೋರ್ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅನೇಕ ಅನುಮಾನಗಳು ಇರುವ ಕಾರಣ ಇಂದಿರಾವತಿ ಕೋಂ ಚಂದಪ್ಪ ಗೌಡ ಇರುವಿಕೆ ಬಗ್ಗೆ ತಕ್ಷಣ ತನಿಖೆ ನಡೆಸಬೇಕು. ಸೌಜನ್ಯ ವಾಸ್ತವವಾಗಿ ಯಾರ ಮಗಳು? ಇಂದಿರಾವತಿಯವರದ್ದೇ ಅಥವಾ ಕುಸುಮಾವತಿಯವರದ್ದೇ ಎಂಬುದರ ತನಿಖೆ ಆಗಬೇಕು. ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳು ಮತ್ತು ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆಯ ಮೂಲಕ ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕುಸುಮಾವತಿಯವರು ನಿಜವಾದ ತಾಯಿ ಅಲ್ಲದಿದ್ದರೂ ಜನರ ಸಹಾನುಭೂತಿ ಪಡೆಯುವ ಉದ್ದೇಶದಿಂದ ತಾನು ಸೌಜನ್ಯಳ ತಾಯಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆಯೂ ಗೊತ್ತಾಗಬೇಕು. ಜಮೀನಿನ ವಿಚಾರಕ್ಕೆ ಕೊಲೆ ನಡೀತಾ ಎನ್ನುವುದರ ಜೊತೆಗೆ ಸೌಜನ್ಯ ಮಾವ ವಿಟ್ಠಲ ಗೌಡ ವಿಚಾರಣೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ.
