ನವದೆಹಲಿ, ಡಿ. 20: ಒಂದುವೇಳೆ ಮಗಳು ಅಪ್ಪನ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದವನನ್ನು ಮದುವೆಯಾದರೆ ಆಕೆಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಸಮುದಾಯದ ಹೊರಗೆ ಮದುವೆಯಾದರೆ ಅಥವಾ ಮಗಳು ಅಪ್ಪನಿಗೆ ನೋವುಂಟಾಗುವಂತೆ ವರ್ತಿಸಿದರೆ ಆ ತಂದೆ ತನ್ನ ಮಗಳನ್ನು ಆಸ್ತಿಯ ವಿಲ್ನಿಂದ ಹೊರಗಿಡಬಹುದು. ಇದರಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮಹತ್ವದ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯ ಪೀಠವು ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ಶೈಲಾ ಜೋಸೆಫ್ಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ತೀರ್ಪನ್ನು ರದ್ದುಗೊಳಿಸಿದೆ. ಆ ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ. ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಕಾನೂನು ಮೊರೆಹೋಗಿದ್ದರು.






