SSLC Result 2026: ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ ಫಲಿತಾಂಶ 2026 ಇಂದು ಗುರುವಾರ (ಏ.23) ಬಿಡುಗಡೆ ಆಗಿದೆ. ಈ ಬಾರಿ ಶೇಕಡಾ ಶೇ 90ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದೆಂದು ಕೂಡ ಈ ರೀತಿಯ ಫಲಿತಾಂಶ ಬಂದಿರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ.
ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತ ಜಾಲತಾಣದ ಲಿಂಕ್ www.karresults.nic.in ಗೆ ಭೇಟಿ ನೀಡಿ ವೀಕ್ಷಿಸಬಹುದು. ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದೆಂದು ಸಚಿವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿ ಪ್ರಮುಖ ಅಂಶಗಳು, ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಎಸ್ಎಸ್ಎಲ್ಸಿ ಫಲಿತಾಂಶ: 7 ಮಂದಿ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್
ಮೂವರು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ರಲ್ಲಿ 625 ಅಂಕ ಪಡೆದವರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ (ಶೇ 98.09), ಹಾಸನ 4ನೇ ಸ್ಥಾನ (ಶೇ 97.51) ಗಳಿಸಿವೆ.





