ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಬಲಿ ಪಡೆದ ಬಾರಾಮತಿ ವಿಮಾನ ದುರಂತದಲ್ಲಿ ಕೇವಲ ರಾಜಕೀಯ ನಾಯಕನಲ್ಲದೆ, ವಿಮಾನಯಾನ ಕ್ಷೇತ್ರದ ಇಬ್ಬರು ದಕ್ಷ ಮತ್ತು ಅನುಭವಿ ಪೈಲಟ್ಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟ ಪೈಲಟ್ಗಳನ್ನು ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್ ಎಂದು ಗುರುತಿಸಲಾಗಿದೆ.
ಈ ಇಬ್ಬರೂ ಪೈಲಟ್ಗಳು ನವದೆಹಲಿ ಮೂಲದ ‘ವಿಎಸ್ಆರ್ ಏವಿಯೇಷನ್’ ಸಂಸ್ಥೆಗೆ ಸೇರಿದವರು. ಅವರು ಚಲಾಯಿಸುತ್ತಿದ್ದ ಲಿಯರ್ಜೆಟ್ 45 ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಕೊನೆಯ ಕ್ಷಣದವರೆಗೂ ಅವರು ಹೋರಾಡಿದ್ದರು ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಯಾರೀ ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್?
ಕ್ಯಾಪ್ಟನ್ ಸುಮಿತ್ ಕಪೂರ್: ಇವರು ವಿಮಾನದ ಮುಖ್ಯ ಪೈಲಟ್ (Pilot-in-Command) ಆಗಿದ್ದರು. ಖಾಸಗಿ ಚಾರ್ಟರ್ಡ್ ವಿಮಾನಗಳನ್ನು ಹಾರಿಸುವುದರಲ್ಲಿ ಅವರಿಗೆ ದೀರ್ಘಕಾಲದ ಅನುಭವವಿತ್ತು. ವಿಐಪಿಗಳ ಪ್ರಯಾಣವನ್ನು ನಿರ್ವಹಿಸುವಲ್ಲಿ ನುರಿತವಾಗಿದ್ದ ಸುಮಿತ್, ಕ್ಲಿಷ್ಟಕರವಾದ ಲ್ಯಾಂಡಿಂಗ್ ಸಂದರ್ಭಗಳನ್ನೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್, ಬಾರಾಮತಿಯಲ್ಲಿ ಉಂಟಾದ ತಾಂತ್ರಿಕ ವೈಫಲ್ಯ ಅವರ ನಿಯಂತ್ರಣವನ್ನೂ ಮೀರಿತ್ತು.
ಶಾಂಭವಿ ಪಾಠಕ್:
ಇವರು ವಿಮಾನದ ಸಹ-ಪೈಲಟ್ (First Officer) ಆಗಿದ್ದರು. ಮಹಿಳಾ ಪೈಲಟ್ ಆಗಿ ವಿಮಾನಯಾನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದ ಶಾಂಭವಿ, ಯುವ ಪೈಲಟ್ಗಳಿಗೆ ಸ್ಫೂರ್ತಿಯಾಗಿದ್ದರು. ಈ ವಿಮಾನ ಹಾರಾಟದ ವೇಳೆ ಅವರು ಸಂವಹನ ಮತ್ತು ನ್ಯಾವಿಗೇಷನ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಇನ್ನೂ ಈ ಅಪಘಾತಕ್ಕೀಡಾದ ಲಿಯರ್ಜೆಟ್ 45 (ನೋಂದಣಿ ಸಂಖ್ಯೆ VT-SSK) ವಿಮಾನವು ದೆಹಲಿ ಮೂಲದ ‘ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಸೇರಿದ್ದು. ಈ ಸಂಸ್ಥೆಯು ಕಾರ್ಪೊರೇಟ್ ಜೆಟ್ ಸೇವೆಗಳಿಗೆ ಹೆಸರುವಾಸಿಯಾಗಿದೆ. ವಿಮಾನದಲ್ಲಿ ಪೈಲಟ್ಗಳಲ್ಲದೆ ಅಜಿತ್ ಪವಾರ್ ಅವರ ಆಪ್ತ ಸಹಾಯಕ (PSO) ವಿಧಿತ್ ಜಾಧವ್ ಮತ್ತು ಅಟೆಂಡೆಂಟ್ ಪಿಂಕಿ ಜಾಧವ್ ಕೂಡ ಇದ್ದರು. ಇವರೆಲ್ಲರೂ ಈ ಭೀಕರ ದುರಂತದಲ್ಲಿ ಸುಟ್ಟು ಕರಕಲಾಗಿದ್ದಾರೆ.
ದುರಂತದ ಕ್ಷಣಗಳು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ವಿಮಾನವು ರನ್ ವೇ ಸಮೀಪ ನಿಯಂತ್ರಣ ಕಳೆದುಕೊಂಡಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವು ನೆಲಕ್ಕೆ ಅಪ್ಪಳಿಸುವ ಮುನ್ನವೇ ಅಸ್ಥಿರವಾಗಿತ್ತು. ಪೈಲಟ್ಗಳು ತುರ್ತು ಸಂದೇಶ ರವಾನಿಸಲು ಪ್ರಯತ್ನಿಸಿದರೇ ಎಂಬ ಬಗ್ಗೆ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಪರಿಶೀಲನೆ ನಂತರವಷ್ಟೇ ತಿಳಿಯಲಿದೆ. ನುರಿತ ಪೈಲಟ್ಗಳಿದ್ದರೂ, ಯಾಂತ್ರಿಕ ದೋಷವು ಎಂತಹ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್ ಅವರ ಕುಟುಂಬಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಎರಗಿದ್ದು, ವಿಮಾನಯಾನ ಕ್ಷೇತ್ರವು ಇಬ್ಬರು ಪ್ರತಿಭಾವಂತ ಪೈಲಟ್ಗಳನ್ನು ಕಳೆದುಕೊಂಡಿದೆ.





