ಮಂಗಳೂರು, ನ.4: ನಗರದಾದ್ಯಂತ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದು, ಆಕೆಯ ಅಪಾರ್ಟ್ಮೆಂಟ್ನಿಂದ ಸುಮಾರು 15.3 ಲಕ್ಷ ರೂ. ಮೌಲ್ಯದ 153 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.


ಬಂಧಿತ ಮಹಿಳೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲದ ಗುರಿಂಗಾನ ನಿವಾಸಿ ನಸೀಮಾ ಅಲಿಯಾಸ್ ನಸೀಮ್ (42) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನವೆಂಬರ್ 1 ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆಯ ವೇಳೆ ಈ ಜಾಲ ಬೆಳಕಿಗೆ ಬಂದಿದೆ.ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು, ಆ ಪ್ರಕರಣದ ಆರೋಪಿಗೆ ನಸೀಮಾ ಮಾದಕ ವಸ್ತು ಪೂರೈಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ತನಿಖಾಧಿಕಾರಿಗಳು ತಕ್ಷಣವೇ ಮಾದಕ ವಸ್ತು ಪೂರೈಕೆ ಜಾಲದ ಮೂಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಪಂಪ್ವೆಲ್-ಉಜ್ಜೋಡಿ ಬಳಿಯ ಅಪಾರ್ಟ್ಮೆಂಟ್ನ ಮೊದಲ ಮಹಡಿಯಲ್ಲಿರುವ ಫ್ಲಾಟ್ವೊಂದಕ್ಕೆ ದಾಳಿ ನಡೆಸಿದರು. ಈ ಕಾರ್ಯಾಚರಣೆ ವೇಳೆ 15,30,000 ರೂ. ಮೌಲ್ಯದ 153 ಗ್ರಾಂ ಎಂಡಿಎಂಎ ಯನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆಕೆ ಮಂಗಳೂರು ನಗರದಾದ್ಯಂತ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಸಿ ಮಾರಾಟ ಮಾಡುತ್ತಿದ್ದದ್ದು ತಿಳಿದುಬಂದಿದೆ.ಬಂಧಿತ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವಸ್ತು ಪೂರೈಕೆ ಜಾಲದ ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳನ್ನು ಗುರುತಿಸಿ ಬಂಧಿಸಲು ಶೋಧ ಕಾರ್ಯಾಚರಣೆ ಇದೆ.
