ಕುಂದಾಪುರ, ಅ.26: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಬಾಲಕಿಯರು ನೀರುಪಾಲಾದ ದಾರುಣ ಘಟನೆ ಭಾನುವಾರ ಸಂಜೆ ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿ ನಡೆದಿದೆ.



ಮೃತರನ್ನು ಮುಳ್ಳಿಕಟ್ಟೆಯಲ್ಲಿ ಜೋಪಡಿಯಲ್ಲಿ ನೆಲೆಸಿದ್ದ ಮೂಲತಃ ಹಾವೇರಿ ಶಿಗ್ಗಾವಿ ತಾಲೂಕಿನ ಮುದ್ದಿನಕೊಪ್ಪದ ಚಂದ್ರು ಬಸವರಾಜ ವೇಷಗಾರ ಹಾಗೂ ಮಂಜಕಾಳು ದಂಪತಿಯ ಪುತ್ರಿ ಸುನೀತಾ (13) ಹಾಗೂ ಅವರ ಚಿಕ್ಕಪ್ಪನ ಮಗ ದಿ.ಮಂಜುನಾಥ ಹಾಗೂ ಶಾರದಾ ದಂಪತಿಯ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಇವರಿಬ್ಬರು ಹೊಸಾಡು ಸರಕಾರಿ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಸಂಜೆ ಸುಮಾರು 4 ಗಂಟೆಗೆ ಗುಡಿಸಲಿನ ಐದು ಮಕ್ಕಳು ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿರುವ ಕಡುಬಿನ ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಕೆರೆಯ ದಂಡೆಯ ಮೇಲೆ ಬಟ್ಟೆ ತೊಳೆಯುತ್ತಿದ್ದ ಸುನೀತಾ ಮತ್ತು ವೈಶಾಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಈಜಲು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಈಜು ತಜ್ಞ ದಿನೇಶ್ ಖಾರ್ವಿ ನೇತೃತ್ವದ ತಂಡ, ಟೀಮ್ ಹೆಚ್ಐ ತುರ್ತು ಸ್ಪಂದನ ತಂಡ, ಕುಂದಾಪುರ ಅಗ್ನಿಶಾಮಕ ದಳ ಹಾಗೂ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮೇಲೆತ್ತಲು ನೆರವಾದರು.

