ವೇಣೂರು ಎಕ್ಸೆಲ್ ಸಂಸ್ಥೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ


ವೇಣೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ವೇಣೂರು ಎಕ್ಸೆಲ್ ಟೆಕ್ಕೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್ ಇದರ ಸಹಯೋಗದಲ್ಲಿ ನಿಟ್ಟಡೆ, ಬಜಿರೆ ಮತ್ತು ಪಡ್ಡಂದಡ್ಕ ವಲಯ ಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ವೇಣೂರು ಎಕ್ಸೆಲ್ ಟೆಕ್ಕೋ ಸ್ಕೂಲ್ ಮೈದಾನದಲ್ಲಿ ಆ.29ರಂದು ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ. ಉದ್ಘಾಟಿಸಿ ಮಾತನಾಡಿದ ಅವರು, ಎಕ್ಸೆಲ್ ಸಂಸ್ಥೆಯು ಈ ಬಾರಿ ವಲಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎರಡೆರಡು ಕ್ರೀಡಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇಲಾಖೆಯ ವತಿಯಿಂದ ಸಂಸ್ಥೆಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವುದರ ಜತೆಗೆ ಶಿಸ್ತು, ಆತ್ಮವಿಶ್ವಾಸ ಗಟ್ಟಿಗೊಳಿಸುತ್ತದೆ, ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ಆಸಕ್ತಿ ತೋರಿಸಬೇಕು ಎಂದರು.
ವಲಯ ಸಂಘಟನಾ ಅಧಿಕಾರಿ ಆರತಿ ಪ್ರಸ್ತಾವನೆಗೈದರು. ಎಕ್ಸೆಲ್ ಟೆಕ್ನಿ ಸ್ಕೂಲ್ ವೇಣೂರು ಮುಖ್ಯ ಶಿಕ್ಷಕ ಶಾಂತಿರಾಜ್ ಜೈನ್ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಇ.ಆರ್.ಟಿ.ಇ. ಜಗದೀಶ್ ಬಿ., ನಾರಾವಿ ವಲಯ ಸಂಘಟನಾ ಅಧಿಕಾರಿ ಲೋಕಯ್ಯ ಎನ್., ಅಳದಂಗಡಿಯ ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಮಟ್ಟದ ವಾಲಿಬಾಲ್ ತೀರ್ಪುಗಾರ ಕೆವನ್ ಉಪಸ್ಥಿತರಿದ್ದರು.
ಕನ್ನಡ ಶಿಕ್ಷಕಿ ಅಕ್ಷತ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕ ಅಶೋಕ್ ಧನ್ಯವಾದವಿತ್ತರು. ವಿದ್ಯಾರ್ಥಿಗಳಾದ ಸಾನ್ವಿ, ಪ್ರಣಮ್ಯ ಎಂ.ಎಸ್., ಹರ್ಷಿತಾ, ಅನ್ವಿತಾ ಹಾಗೂ ರಶ್ಮಿತಾ ದೇವಾಡಿಗ ಪ್ರಾರ್ಥಿಸಿದರು.
ಬಾಲಕಿಯರ ವಿಭಾಗದಲ್ಲಿ ಕಾಶಿಪಟ್ನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ, ಎಕ್ಸೆಲ್ ಟೆಕ್ನ ಸ್ಕೂಲ್ ವೇಣೂರು ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ನವಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರು ಪ್ರಥಮ ಹಾಗೂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ದ್ವಿತೀಯ ಸ್ಥಾನ ಗಳಿಸಿತು.
ಎಕ್ಸೆಲ್ ಟೆಕ್ನ ಸ್ಕೂಲ್ ವೇಣೂರು ಶಿಕ್ಷಣ ಸಂಯೋಜಕಿ ಕಾವ್ಯಶ್ರೀ ಎನ್. ವಿಜೇತರನ್ನು ಅಭಿನಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕ ದಾಮೋದರ್ ಸಮಗ್ರ ನಿರ್ವಹಣೆ ಮಾಡಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.



