ವೇಣೂರು: ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡುಕೋಡಿ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಸಂಚಾರ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ತೀವ್ರ ಭೀತಿ ವಾತಾವರಣ ನಿರ್ಮಾಣವಾಗಿದೆ.
ಮೂಡುಕೋಡಿ ಗ್ರಾಮದ ದಾಡೇಲು ನಿವಾಸಿ ಶೇಖರ್ ಪೂಜಾರಿ ಎಂಬುವವರ ಮನೆಯಲ್ಲಿದ್ದ ಸಾಕು ನಾಯಿಯ ಮೇಲೆ ಮಧ್ಯರಾತ್ರಿ ಚಿರತೆ ದಾಳಿ ನಡೆಸಿ, ಕೊಂದು ಹಾಕಿದೆ. ಮರುದಿನ ಇದೇ ಗ್ರಾಮದ ಶಶಿಧರ ಎಂಬವರ ಸಾಕು ನಾಯಿಯ ಮೇಲೂ ದಾಳಿ ಮಾಡಿದ್ದು, ನಾಯಿಗೆ ಗಾಯವಾಗಿದೆ. ಈ ಘಟನೆಯಿಂದಾಗಿ ಕೇವಲ ಸಾಕುಪ್ರಾಣಿಗಳನ್ನು ಸಾಕಿದವರಷ್ಟೇ ಅಲ್ಲದೆ, ಜನರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಹಾಗೂ ಕೆಲ ಸದಸ್ಯರು ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ವಿಚಾರ ತಿಳಿದು ಆಗಮಿಸಿದ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಧೈರ್ಯ ತುಂಬಿ ರಾತ್ರಿ ಸುಡುಮದ್ದು ಸಿಡಿಸುವಂತೆ ಸಲಹೆ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಬೋನು ಅಳವಡಿಸಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.





