ಬೆಳ್ತಂಗಡಿ: ಕೆವೈಸಿ ನವೀಕರಣಗೊಳ್ಳದೇ ಗ್ಯಾಸ್ಸಿ ಸಿಲಿಂಡರ್ ನೀಡಲು ನಿರಾಕರಣೆ ಮಾಡಿದ ವಿತರಕನ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿ, ಬಲವಂತವಾಗಿ ಸಿಲಿಂಡರ್ ಹೊತ್ತೊಯ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಉರುವಾಲು ಪದವು ಎನ್ನುಲ್ಲಿ ನಡೆದಿದ್ದು ಹಲ್ಲೆಗೆ ಒಳಗಾದ ಗ್ಯಾಸ್ ವಿತರಕ ನೀಡಿರುವ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಲಾಯಿಲದ ಶಿವಕುಮಾರ್ ಎಂಬವರ ಮಾಲಕತ್ವದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ವಿತರಕರಾಗಿ ಕೆಲಸ ಮಾಡುವ ಸಚಿನ್ (21) ಎಂಬಾತನೇ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ ಉರುವಾಲು ಪದವು ನಿವಾಸಿ ಯಾಕೂಬ್ ಎಂಬಾತನೇ ಹಲ್ಲೆ ನಡೆಸಿ ಗ್ಯಾಸ್ ಸಿಲಿಂಡರ್ ಕೊಂಡೊಯ್ದ ವ್ಯಕ್ತಿಯಾಗಿದ್ದಾನೆ.
ಗ್ಯಾಸ್ ವಿತರಕ ಸಚಿನ್ ಅವರು ಜೂನ್ 20 ರಂದು ಮಧ್ಯಾಹ್ನ 3 ಗಂಟೆಗೆ ಪಿಕಪ್ ವಾಹನದಲ್ಲಿ ಗ್ಯಾಸ್ ವಿತರಣೆ ಮಾಡುತ್ತಿದ್ದು, ಉರುವಾಲು ಪದವು ಎನ್ನುವಲ್ಲಿಗೆ ತಲುಪಿದ ಸಂದರ್ಭದಲ್ಲಿ ಪರಿಚಯದವರಾದ ಯಾಕೂಬ್ ಅವರು ಸಿಲಿಂಡರ್ ನೀಡುವಂತೆ ಕೇಳಿದ್ದಾರೆ. ಆದರೆ ಕೆವೈಸಿ ನವೀಕರಣ ಆಗದ ಕಾರಣ ಸಚಿನ್ ಅವರು ಸಿಲಿಂಡರ್ ನೀಡಲು ನಿರಾಕರಿಸಿದ್ದು, ಆಫೀಸಿಗೆ ಹೋಗಿ ಸರಿಪಡಿಸಲು ಹೇಳಿದ್ದಾರೆ.
ಆದರೆ ಆರೋಪಿ ಯಾಕೂಬ್ ಎನ್ನುವವರು ಆಕ್ರೋಶಗೊಂಡು, ಸಚಿನ್ ಅವರ ಕೈಯಲ್ಲಿದ್ದ ಮೊಬೈಲ್ ಕಿತ್ತು ನೆಲಕ್ಕೆ ಎಸೆದಿದ್ದಾರೆ. ಇದರಿಂದ ಸುಮಾರು 8000 ರೂ. ಮೌಲ್ಯದ ಮೊಬೈಲ್ ಜಖಂಗೊಂಡಿದೆ. ಅಲ್ಲದೇ, ವಾಹನದಿಂದ ಬಲವಂತವಾಗಿ ಒಂದು ಸಿಲಿಂಡರ್ ಕೆಳಕ್ಕೆ ಇಳಿಸಿದ್ದು, ಇದನ್ನು ತಡೆಯಲೆಂದು ಹೋದ ಸಚಿನ್ ಅವರ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ದೂಡಿ ಹಾಕಿ, ಅವಾಚ್ಯ ಶಬ್ದಗಳ ನಿಂದನೆ ಮಾಡಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಇಷ್ಟೇ ಅಲ್ಲದೆ, ತುಂಬಿದ ಸಿಲಿಂಡರ್ ಒಂದನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು ಅದರಂತೆ ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



