ಅಯೋಧ್ಯೆಯ ಶ್ರೀ ರಾಮ ಮಂದಿರ ದೇಣಿಗೆ ಹಗರಣದಲ್ಲಿ ಭಾರಿ ಅಕ್ರಮದ ಆರೋಪ ಕೇಳಿಬಂದಿದೆ. ಭಕ್ತರ ಕಾಣಿಕೆ ಹಣ ಹಾಗೂ ಆಭರಣಗಳ ದುರುಪಯೋಗದ ಹಿನ್ನೆಲೆಯಲ್ಲಿ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿದ್ದ 40 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.
ವಿಶೇಷ ತನಿಖಾ ತಂಡ (SIT) ಆರು ದಿನಗಳ ತನಿಖೆ ಬಳಿಕ ಇಂದು ಸಿಎಂ ಯೋಗಿ ಆದಿತ್ಯನಾಥ್ಗೆ ಪ್ರಾಥಮಿಕ ವರದಿ ಸಲ್ಲಿಸಲಿದೆ. ಹಗರಣದ ವ್ಯಾಪ್ತಿ ದೇವಸ್ಥಾನದ ಖರೀದಿ ವ್ಯವಹಾರಗಳಿಗೂ ವಿಸ್ತರಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ನಿರೀಕ್ಷಿಸಲಾಗಿದೆ.
ಬ್ಯಾಂಕ್ ಟ್ರಸ್ಟ್ ಈಗ ಅವರ ಜಾಗಕ್ಕೆ ಸಂಪೂರ್ಣ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಹಣ ಮತ್ತು ಆಭರಣಗಳ ಎಣಿಕೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರಿಸಲಾಗಿದೆ. ಮತ್ತೊಂದೆಡೆ, ಆರು ದಿನಗಳ ಕಾಲ ಅಯೋಧ್ಯೆಯಲ್ಲೇ ಬೀಡುಬಿಟ್ಟು ತನಿಖೆ ನಡೆಸಿದ ವಿಶೇಷ ತನಿಖಾ ತಂಡವು (SIT) ಇಂದು ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಿದೆ.
ಮೂವರು ಸದಸ್ಯರ ಎಸ್ಐಟಿ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ಮಾಡುವ ವಿಧಾನಗಳು ಮತ್ತು ಆಭರಣಗಳ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆ. ದೇವಸ್ಥಾನದ ಟ್ರಸ್ಟ್ಗೆ ಸಂಬಂಧಿಸಿದ ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ವಂಚನೆ ಶುರುವಾಗಿದ್ದು ಯಾವಾಗ?
ಮೂಲಗಳ ಪ್ರಕಾರ, 2025 ರ ಆರಂಭದಲ್ಲಿ ಪ್ರಯಾಗ್ರಾಜ್ನಲ್ಲಿ ನಡೆದ ‘ಮಹಾಕುಂಭ ಮೇಳ’ದ ಸಮಯದಲ್ಲಿ ಈ ದೊಡ್ಡ ವಂಚನೆ ನಡೆದಿದೆ. ಆ ಎರಡು ತಿಂಗಳ ಅವಧಿಯಲ್ಲಿ ಪ್ರತಿದಿನ ಸುಮಾರು 10 ಲಕ್ಷ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದರು. ಭಕ್ತರ ದಟ್ಟಣೆ ಎಷ್ಟಿತ್ತೆಂದರೆ, ದೇವಸ್ಥಾನದ ದೇಣಿಗೆ ಪೆಟ್ಟಿಗೆಗಳು ಕೇವಲ ಎರಡು ಗಂಟೆಗಳಲ್ಲಿ ನೋಟುಗಳಿಂದ ತುಂಬಿ ಹೋಗುತ್ತಿದ್ದವು. ಇದೇ ಸಮಯವನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಎಂ ಯೋಗಿ ಅವರಿಗೆ ವರದಿ ಸಲ್ಲಿಕೆಯಾದ ಬಳಿಕ ತಪ್ಪು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುವ ಸಾಧ್ಯತೆಯಿದೆ.



