ನವದೆಹಲಿ, ಜೂ. 22: ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಾತಿಗೆಂದು ನಡೆಸಲಾಗುವ ನೀಟ್ನ ಮರುಪರೀಕ್ಷೆ ದೇಶಾದ್ಯಂತ ಭಾನುವಾರ ಯಶಸ್ವಿಯಾಗಿ ನಡೆದಿದೆ. ಪೇಪರ್ ಲೀಕ್ ಆಗಿದ್ದ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದರಿಂದ ನಿನ್ನೆ ಮರುಪರೀಕ್ಷೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಯಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸಿ ಪರೀಕ್ಷೆ ಏರ್ಪಡಿಸಿತ್ತು. ಮತ್ತು ನಕಲಿ ಸೋರಿಕೆ ಪ್ರಕರಣಗಳ ಹಾವಳಿಯ ಮಧ್ಯೆ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ದೇಶಾದ್ಯಂತ 551 ನಗರಗಳಲ್ಲಿ, 5,440 ಕೇಂದ್ರಗಳಲ್ಲಿ 22.79 ಅಭ್ಯರ್ಥಿಗಳಿಗೆ ನೀಟ್ ಪರೀಕ್ಷೆ ನಡೆಸಲಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15ರವರೆಗೆ ರೀ ಎಕ್ಸಾಮಿನೇಶನ್ ನಡೆದಿದೆ. ವಿದ್ಯಾರ್ಥಿಗಳ ಫೇಸ್ ಅಥೆಂಟಿಕೇಶನ್ ಹಾಗೂ ಇತರ ಭದ್ರತೆಗಾರಿ ಲಕ್ಷ ಸಮೀಪದಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತೀ ಕೇಂದ್ರದಲ್ಲೂ 40-50 ಭದ್ರತಾ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿತ್ತು. 48,448 ಬಯೋಮೆಟ್ರಿಕ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್, ಪ್ಯಾರಾಮಿಲಿಟರಿ ಪಡೆಗಳನ್ನೂ ಬಳಸಿಕೊಳ್ಳಲಾಗಿತ್ತು.
ಕಳೆದ ಬಾರಿಗಿಂತ ಪರೀಕ್ಷೆ ಕಠಿಣ ಎಂದ ವಿದ್ಯಾರ್ಥಿಗಳು
ಮಾಧ್ಯಮಗಳಿಗೆ ಬಂದ ವರದಿಗಳ ಪ್ರಕಾರ, ಕಳೆದ ತಿಂಗಳು ನಡೆದಿದ್ದ ನೀಟ್ ಪರೀಕ್ಷೆಗಿಂತ ಈ ಮರುಪರೀಕ್ಷೆ ಹೆಚ್ಚು ಕಠಿಣವಾಗಿತ್ತು ಎಂದು ಹೆಚ್ಚಿನ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಅದರಲ್ಲೂ ಭೌತಶಾಸ್ತ್ರ ಪತ್ರಿಕೆ ಬಹಳ ಕಠಿಣ ಇತ್ತು ಎಂದು ಬಹಳ ಮಕ್ಕಳು ಅಭಿಪ್ರಾಯಪಟ್ಟಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಪತ್ರಿಕೆಗಳ ಪೈಕಿ ಜೀವಶಾಸ್ತ್ರ ಇದ್ದುದರಲ್ಲಿ ಸುಲಭವಿತ್ತೆಂದು ಬಹಳ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.
ಅಭ್ಯರ್ಥಿಗಳಿಗೆ ತೊಂದರೆಯಾಗದಿರಲೆಂದು ಏರ್ಪೋರ್ಟ್ನಲ್ಲೇ ಸ್ವಲ್ಪ ಹೊತ್ತು ಉಳಿದುಕೊಂಡ ಮೋದಿ
ನೀಟ್ ಪರೀಕ್ಷೆ ನಡೆದ ನಿನ್ನೆ ಹಲವು ರೀತಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಪ್ರಧಾನಿಗಳು ಏರ್ಪೋರ್ಟ್ನಲ್ಲೇ 45 ನಿಮಿಷ ಕಾದು ನಿಂತ ಘಟನೆಯೂ ಸೇರಿದೆ. ಮೋದಿಯವರು ಕೋಲ್ಕತಾದಿಂದ ಫ್ಲೈಟ್ನಲ್ಲಿ ಮಧ್ಯಾಹ್ನ 1:15ಕ್ಕೆ ದಿಲ್ಲಿ ಏರ್ಪೋರ್ಟ್ಗೆ ಬಂದಿಳಿದಿದ್ದರು. ಅವರು ಅಲ್ಲಿಂದ ರಸ್ತೆ ಮೂಲಕ ಸಾಗಿ ಹೋಗುವುದಿತ್ತು. ಆದರೆ, ನೀಟ್ ಪರೀಕ್ಷೆ ಎರಡು ಗಂಟೆಗೆ ಇತ್ತು. ನಗರದ ವಿವಿಧೆಡೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ತಲುಪುವ ಧಾವಂತದಲ್ಲಿ ಇದ್ದಿರುತ್ತಾರೆ. ಈ ಹೊತ್ತಲ್ಲಿ ಪ್ರಧಾನಿಗಳು ರಸ್ತೆ ಮೂಲಕ ಸಾಗಿದರೆ ಟ್ರಾಫಿಕ್ ಜಾಮ್ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಪ್ರಧಾನಿಗಳು ಪರೀಕ್ಷೆಯ ಆರಂಭದ ಸಮಯವಾದ ಎರಡು ಗಂಟೆಯವರೆಗೂ ಏರ್ಪೋರ್ಟ್ನಲ್ಲೇ ಕಾದು ನಂತರ ತಮ್ಮ ನಿವಾಸಕ್ಕೆ ತೆರಳಿದರು.



