ವೇಣೂರು: ಇಲ್ಲಿಯ ಫಲ್ಗುಣಿ ಸೇತುವೆಯ ಮೇಲೆ ಹಾದುಹೋಗಿದ್ದ ಬಿಎಸ್ಎನ್ಎಲ್ ಸಂಸ್ಥೆಗೆ ಸೇರಿದ ಬೆಳೆಬಾಳುವ ಕೇಬಲ್ಗಳಿಗೆ ಖದೀಮರು ಕಣ್ಣ ಹಾಕಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ವೇಗದ ಇಂಟರ್ನೆಟ್ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ ಬಿಎಸ್ಎನ್ಎಲ್ ಹಲವು ಗ್ರಾಮಗಳಿಗೆ ಫೈಬರ್ ಬ್ರಾಡ್ಬ್ಯಾಂಡ್ ಸಂಪರ್ಕ ಒದಗಿಸುವ ಕಾರ್ಯವನ್ನು ಮಾಡಿದೆ. ಹಾಗಾಗಿ ನಿರುಪಯುಕ್ತ ಹಳೆಯ ಕೇಬಲ್ಗಳು ರಸ್ತೆಗಳಲ್ಲಿ ಹಾದುಹೋಗಿದೆ. ಮೇಲ್ನೊಟಕ್ಕೆ ಕಾಣಸಿಗುವ ಸೇತುವೆ ಮೇಲೆ ಹಾದು ಹೋಗಿರುವ ಕೇಬಲ್ಗಳಿದ್ದು, ಸುಲಭದಲ್ಲಿ ತೆಗೆಯಬಹುದಾಗಿದ್ದು, ರಾತ್ರಿ ವೇಳೆ ಕಳ್ಳರು ಕದ್ದೊಯ್ದಿರುವ ಬಗ್ಗೆ ಮಾಹಿತಿ ಲಭಿಸಿದೆ.
ಸ್ಥಳೀಯ ಪಾರ್ಕಿಂಗ್ನ ವಾಹನ ಚಾಲಕರು ಮುಂಜಾನೆ ಪಾರ್ಕ್ಗೆ ಬರುವ ವೇಳೆ ಕಳ್ಳರು ಕೈಚಳಕ ತೋರಿಸಿ ಎಸ್ಕೇಪ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಎಸ್ಎನ್ಎಲ್ ಸಿಬ್ಬಂದಿಗಳನ್ನು ಸಂಪರ್ಕಿಸಿದಾಗ ಕಳ್ಳರು ಕಳವುಗೈದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮೌಖಿಕ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಬೆಲೆಬಾಳುವ ಕೇಬಲನ್ನು ತುಂಡರಿಸಿ ಸುತ್ತಿ ಸೇತುವೆ ಮೇಲೆ ಇಟ್ಟಿರುವ ಕಳ್ಳರು ಸಾಗಾಟಕ್ಕೆ ಹೊಂಚು ಹಾಕಿದ್ದಾರೆ.
ಬಿಎಸ್ಎನ್ಎಲ್ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಸಂವಹನ ಸೇವೆ ಒದಗಿಸುವ ಕಂಪೆನಿಯಾಗಿದೆ. ಆದರೆ ಆಧುನಿಕತೆಗೆ ತಕ್ಕಂತೆ ಅಭಿವೃದ್ಧಿ ಕಂಡಿರುವ ಸಂಸ್ಥೆಯ ಹಳೆಯ ಸಾಮಾಗ್ರಿಗಳ ಸೂಕ್ತ ವಿಲೇವಾರಿಗೆ ಸಂಸ್ಥೆ ಕ್ರಮ ಕೈಗೊಂಡಿಲ್ಲ. ಈಗಾಗಿ ಹಳೆಯ ಸಾಮಾಗ್ರಿ, ಉಪಕರಣಗಳನ್ನು ಉಂಡ ಮನೆಗೆ ಕಣ್ಣ ಎಂಬಂತೆ ಅಧಿಕಾರಿ, ಸಿಬ್ಬಂದಿಗಳೇ ಕಳವುಗೈದಿರುವ ಪ್ರಕರಣಗಳೂ ಹಲವು ಕಡೆಗಳಲ್ಲಿ ನಡೆದಿದೆ.



