ಅಯೋಧ್ಯೆ ಶ್ರೀ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಾಯಕ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಕಾಣಿಕೆ ಎಣಿಕೆ ಮಾಡುವ ತಂಡದಲ್ಲಿದ್ದ ಈ ಆರೋಪಿಗಳನ್ನು ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಇದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಯೋಗಿ ಸರ್ಕಾರ ಕಠಿಣ ಕ್ರಮದ ಭರವಸೆ ನೀಡಿದೆ.
ಬಂಧಿತ ಆರೋಪಿಗಳೆಲ್ಲರೂ ದೇವಸ್ಥಾನದ ಕಾಣಿಕೆ ಮತ್ತು ನಗದು ಹಣವನ್ನು ಎಣಿಕೆ ಮಾಡುವ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದ್ದ ತಂಡದಲ್ಲಿದ್ದರು. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಬಲವಾದ ಸಾಕ್ಷ್ಯಗಳು ಮತ್ತು ವಿಧಿವಿಜ್ಞಾನ ಪುರಾವೆಗಳ ಆಧಾರದ ಮೇಲೆ ಈ ಎಂಟು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾದ ಕೇವಲ ಒಂದು ದಿನದಲ್ಲೇ ಪೊಲೀಸರು ಈ ಬಂಧನದ ಕ್ರಮ ಕೈಗೊಂಡಿದ್ದಾರೆ.
ಅಪರಾಧಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ, ಯೋಗಿ ಸರ್ಕಾರ ಎಚ್ಚರಿಕೆ
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಈ ವಿಷಯವು ಭಾರಿ ಜಿದ್ದಾಜಿದ್ದಿನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ, ಇದು ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ. ಮೊದಲಿನಿಂದಲೂ ನಮ್ಮ ಸರ್ಕಾರ ಅಪರಾಧಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದೆ. ರಾಮ ಮಂದಿರದ ಪವಿತ್ರ ದೇಣಿಗೆಯಲ್ಲಿ ತಪ್ಪು ಮಾಡಿರುವ ಯಾವುದೇ ಅಪರಾಧಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಅವರಿಗೆ ಕಠಿಣ ಶಿಕ್ಷೆ ಖಂಡಿತ ಎಂದು ಭರವಸೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷಗಳು
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇವಸ್ಥಾನದಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ, ಈಗ ಕೇವಲ ಸಣ್ಣ ನೌಕರರನ್ನು ಬಂಧಿಸಿ ಅಸಲಿ ಸಾಕ್ಷ್ಯಗಳನ್ನು ನಾಶಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಮಾತನಾಡಿ, ಸರ್ಕಾರ ಕೇವಲ ಹೆಸರಿಗಷ್ಟೇ ಔಪಚಾರಿಕವಾಗಿ ಎಫ್ಐಆರ್ ದಾಖಲಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷವು, ರಾಮ ಮಂದಿರದ ದೇಣಿಗೆ ಕಳ್ಳತನವು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ, ಈ ವಿಷಯದಲ್ಲಿ ಬಿಜೆಪಿ ಸಂಪೂರ್ಣ ಅಸಹಾಯಕವಾಗಿದೆ ಎಂದು ಟೀಕಿಸಿದೆ.



