ಮೈಸೂರು, ಅ.2: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆ ಕಂಬಳಕ್ಕೆ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಸುಮಾರು 25 ರಿಂದ 30 ಲಕ್ಷ ಜನರು ಕಂಬಳ ವೀಕ್ಷಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದ್ದು, ವೀಕ್ಷಕರಿಗೆ ಸುಗಮ ಅನುಭವ ನೀಡಲು ಸಮಗ್ರ ವ್ಯವಸ್ಥೆಗಳನ್ನು ಮಾಡಲಾಗಿದೆ. ಸುಮಾರು 8,000 ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಾಸ್ಗಳ ಮೂಲಕ ಪ್ರವೇಶ ನೀಡಲಾಗುವುದು. ಜೊತೆಗೆ, ಒಂದೇ ಬಾರಿಗೆ 5,000 ಜನರಿಗೆ ನಿಂತು ವೀಕ್ಷಿಸಲು ಸಹ ಅವಕಾಶವಿದೆ. ಕಾರ್ಯಕ್ರಮದ ಸ್ಥಳದಲ್ಲಿ ಕುಟುಂಬ ಸಮೇತ ಭೇಟಿ ನೀಡುವವರಿಗೆ ಸೆಲ್ಫಿ ಮತ್ತು ಫೋಟೋ ತೆಗೆಸಿಕೊಳ್ಳಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕಂಬಳವು 48 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿದ್ದು, ಭಾನುವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಪಾಸ್ ಕೌಂಟರ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕಂಬಳವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಗುರಿ ಹೊಂದಲಾಗಿದೆ.





