ದೆಹಲಿ, ನ. 21: ರಕ್ತಸಂಬಂಧಿಕರ ನಡುವಿನ ವಿವಾಹಗಳ (ಸೋದರಸಂಬಂಧಿಗಳ ನಡುವಿನ ಮದುವೆ) ಕುರಿತು ಸೂಕ್ತ ಕಾನೂನು ರೂಪಿಸುವ ಅಥವಾ ವ್ಯಾಪಕ ಜಾಗೃತಿ ಮೂಡಿಸುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತಾನು ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಲು ಬಯಸುವುದಿಲ್ಲ, ಬದಲಾಗಿ ಈ ವಿಷಯದ ಕುರಿತು ಸರ್ಕಾರವನ್ನು ಸಂವೇದನಾಶೀಲಗೊಳಿಸಲು ಮಾತ್ರ ಬಯಸುವುದಾಗಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಚಾರ್ವಿ ಎಸ್. ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.




ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪೀಠ ಹೇಳಿದ್ದೇನು?
ರಕ್ತಸಂಬಂಧಿಕರ ನಡುವಿನ ವಿವಾಹಗಳನ್ನು ನ್ಯಾಯಾಲಯವು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಸಾಮಾಜಿಕ ಸುಧಾರಣಾ ಕಾನೂನಿನ ಮೂಲಕ ಇಂತಹ ವಿವಾಹಗಳನ್ನು ನಿಯಂತ್ರಿಸುವುದು ಸಂಪೂರ್ಣವಾಗಿ ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. “ಸೂಕ್ತ ಕಾನೂನು ತರುವ ಅಗತ್ಯತೆಯನ್ನು ಪರಿಗಣಿಸಲು ಅಥವಾ ಸೂಕ್ತ ಪಠ್ಯಕ್ರಮವೂ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ/ಜಾಗೃತಿ ಖಚಿತಪಡಿಸಿಕೊಳ್ಳಲು ಭಾರತ ಒಕ್ಕೂಟಕ್ಕೆ ಮನವರಿಕೆ ಮಾಡಿಕೊಡುವ ಸೀಮಿತ ಉದ್ದೇಶಕ್ಕಾಗಿ ನಾವು ನೋಟಿಸ್ ಜಾರಿ ಮಾಡುತ್ತಿದ್ದೇವೆ. ನಾವು ಅವರಿಗೆ ನಿರ್ದೇಶನ ನೀಡುವುದಿಲ್ಲ, ಕೇವಲ ಸಂವೇದನಾಶೀಲಗೊಳಿಸುತ್ತೇವೆ” ಎಂದು ಪೀಠವು ಹೇಳಿದೆ.

ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಚಾರ್ವಿ ಎಸ್. ಅರ್ಜಿಯಲ್ಲಿ ಏನಿದೆ?
ವಕೀಲ ಅಂಜುಮನ್ ತ್ರಿಪಾಠಿ ಅವರ ಮೂಲಕ ಅರ್ಜಿ ಸಲ್ಲಿಸಿರುವ ಬೆಂಗಳೂರು ನಿವಾಸಿ, ಕಾನೂನು ವಿದ್ಯಾರ್ಥಿನಿ ಚಾರ್ವಿ ಎಸ್., ತಮ್ಮ ಅರ್ಜಿಯಲ್ಲಿ ಹಲವು ಗಂಭೀರ ವೈದ್ಯಕೀಯ ಮತ್ತು ಕಾನೂನು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅರ್ಜಿದಾರೆ ಚಾರ್ವಿ ಶೇ. 40ರಷ್ಟು ದೃಷ್ಟಿ ದೋಷದಿಂದ ಬಳಲುತ್ತಿದ್ದು, ತಮ್ಮ ಸಮುದಾಯದ ಹಳೆಯ ಸಂಪ್ರದಾಯದಂತೆ ನಡೆದ ಸೋದರಸಂಬಂಧಿಗಳ ವಿವಾಹದಿಂದ ಜನಿಸಿದ ಮಗುವಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಕ್ತಸಂಬಂಧಿಕರ ನಡುವಿನ ವಿವಾಹಗಳು ಆನುವಂಶಿಕ ಕಾಯಿಲೆಗಳು, ಜನ್ಮಜಾತ ನ್ಯೂನತೆಗಳು, ಇಂದ್ರಿಯ ದೋಷಗಳು, ಬೆಳವಣಿಗೆಯ ಅಸಮರ್ಥತೆ ಮತ್ತು ಶಿಶು ಮರಣದ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನಗಳು ತಿಳಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇದರ ಪರಿಣಾಮಗಳ ಅರಿವಿಲ್ಲದೆ ಕುಟುಂಬದೊಳಗೆ ಮದುವೆಗಳು ನಡೆಯುತ್ತಿವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 5(iv) ಮತ್ತು ಸೆಕ್ಷನ್ 5(v) ಅಡಿಯಲ್ಲಿ ‘ಸಪಿಂಡ’ ಅಥವಾ ನಿಷೇಧಿತ ಸಂಬಂಧಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ವಿವಾಹವಾಗಲು ಇರುವ ವಿನಾಯಿತಿಗಳನ್ನು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ (ಕೌನ್ಸೆಲಿಂಗ್, ಅಪಾಯದ ಮಾಹಿತಿ, ವೈದ್ಯಕೀಯ ತಪಾಸಣೆ) ಮಾತ್ರ ಅನುಮತಿಸುವಂತೆ ವ್ಯಾಖ್ಯಾನಿಸಬೇಕು ಎಂದು ಕೋರಲಾಗಿದೆ.
