ಬೆಂಗಳೂರು, ನ. 17: ಕರ್ನಾಟಕದ ಗ್ರಾಮಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆ ಮಾಡಬೇಕಾದ 2,186.20 ಕೋಟಿ ರೂ. ಅನುದಾನವನ್ನ ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆರೋಪಿಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ತೆರವು ಅರ್ಜಿ (ಎಸ್.ಎಲ್.ಪಿ.) ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.




ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ಕೇಂದ್ರ ಸರ್ಕಾರವು ಕರ್ನಾಟಕದ ಮೇಲೆ ಮಾತ್ರ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿದೆ. ಹೀಗಾಗಿ ಇವತ್ತು ಅನಿವಾರ್ಯ ಕಾರಣಗಳಿಂದ ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಬೇಕಾಗಿದೆ. ನಾನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಾಲೋಚನೆ ಮಾಡಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಎಸ್ಎಲ್ಪಿ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಸುಪ್ರೀಂಗೆ ಅರ್ಜಿ ಸಲ್ಲಿಸಲು ಸೂಚನೆ
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರೊಂದಿಗೆ ಸಮಾಲೋಚಿಸಿದ ಸಚಿವರು, ರಾಜ್ಯ ಸರ್ಕಾರ ಹಲವು ಮನವಿ ಮಾಡಿದರೂ, ಅಗತ್ಯ ದಾಖಲಾತಿ ಸಲ್ಲಿಸಿದರೂ 2025-26ನೇ ಸಾಲಿನ 2186.20 ಕೋಟಿ ರೂ. ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದು ಮಾತ್ರ ಉಳಿದಿರುವ ಏಕೈಕ ಮಾರ್ಗ. ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆಯ ಕೊರತೆಯಾಗಿದ್ದು ಬರಪರಿಸ್ಥಿತಿ ತಲೆದೋರಿದೆ. ಪಂಚಾಯಿತಿಗಳಲ್ಲಿ ದುರಸ್ತಿಗೂ ಹಣವಿಲ್ಲ. ಕೇಂದ್ರ ಸರ್ಕಾರ ಈ ರೀತಿ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣವನ್ನೇ ತಡೆ ಹಿಡಿದಿರುವುದು ಸರಿಯಲ್ಲ. ಹೀಗಾಗಿ ವಿಳಂಬ ಮಾಡದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.
ಕೋರ್ಟ್ನಲ್ಲಿ ಎಸ್ಎಲ್ಪಿ ಹಾಕಲು ತೀರ್ಮಾನ
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖಂಡ್ರೆ, ನಮಗೇನು ಕೇಂದ್ರದ ಜೊತೆಯಲ್ಲಿ ಸಂಘರ್ಷ ಮಾಡಬೇಕು ಅಂತ ಏನಿಲ್ಲ. ನಾವು ಉತ್ತಮವಾದಂತಹ ಬಾಂಧವ್ಯ ಇಟ್ಟುಕೊಂಡು ಹೋಗಬೇಕು. ನಾವು ಇವತ್ತು ಅನೇಕ ವಿಚಾರದಲ್ಲಿ ಅವರಿಗೆ ಸಹಕಾರ ಕೊಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕದ ಮೇಲೆ, ಪ್ರಹಾರದ ಮೇಲೆ, ಪ್ರಹಾರ ಮಾಡುತ್ತಿದೆ. ಹೀಗಾಗಿ ಇವತ್ತು ಅನಿವಾರ್ಯ ಕಾರಣಗಳಿಂದ ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಬೇಕಾಗಿದೆ. ನಾನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಾಲೋಚನೆ ಮಾಡಿದ್ದು, ಎಜಿ ಶಶಿಕರಣ ಶೆಟ್ಟಿ ಅವರ ಜೊತೆಯಲ್ಲಿ ಚರ್ಚೆ ಮಾಡಿದ್ದೇವೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಎಸ್ಎಲ್ಪಿ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ. ರಿಟ್ ಪಿಟಿಷನ್ ಹಾಕಬೇಕು ಅಂತ ಹೇಳಿ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಶೀಘ್ರದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ, ಕರ್ನಾಟಕಕ್ಕೆ ನ್ಯಾಯ ಸಿಗಬೇಕು ಎಂದು ವಾದ ಮಾಡುತ್ತೇವೆ . 2023-24 ರಲ್ಲಿ ಸುಮಾರು 3,000 ಮೇಲ್ಪಟ್ಟು ಕೋಟಿ ನಮ್ಮಲ್ಲಿ 3,498 ಕೋಟಿ ಇವತ್ತು ಬರಕ್ಕಾಗಿ ಹಣ ಬರಬೇಕಾಗಿತ್ತು. ಹಿಂದಿನ ಸಿದ್ದರಾಮಯ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಹೋದ ಮೇಲೆ ಆ 3,498 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡ್ತೀವಿ ಅಂತ ಹೇಳಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಕೊಟ್ಟರು. ಇದರೊಂದಿಗೆ ಸುಪ್ರೀಂಕೋರ್ಟ್ ನಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಅದೇ ವಿಶ್ವಾಸ ಈಗಲೂ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
